

ಸಾಗರ: ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ವತಂತ್ರ ಪಿಯು ಕಾಲೇಜಿನ ಪ್ರಾಚಾರ್ಯ ವಿ.ರೋಹಿತ್ ಅವರಿಗೆ 2023ನೇ ಸಾಲಿನ ರಾಷ್ಟ್ರಮಟ್ಟದ ಸಿ.ಎನ್.ಆರ್.ರಾವ್ ಅತಿ ವಿಶಿಷ್ಟ ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
14 ವರ್ಷಗಳಿಂದ ಭೌತಶಾಸ್ತ್ರ ಉಪನ್ಯಾಸಕರಾಗಿ ಹಾಗೂ ಹೊಂಗಿರಣ ಸಂಸ್ಥೆಯ ಅಟಲ್ ಟಿಂಕರಿಂಗ್ ಲ್ಯಾಬ್ ಸಂಯೋಜಕರಾಗಿ ರೋಬಾಟಿಕ್ಸ್ ಕ್ಷೇತ್ರದಲ್ಲಿ ರೋಹಿತ್ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ರೋಬಾಟಿಕ್ ಕ್ಷೇತ್ರದಲ್ಲಿ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರೋಹಿತ್ ವೈಜ್ಞಾನಿಕ ಶಿಕ್ಷಣದ ಸಂಪನ್ಮೂಲ ವ್ಯಕ್ತಿಯಾಗಿ, ಅಂಕಣಕಾರರಾಗಿ ಲೇಖನ ಬರೆಯುತ್ತಿದ್ದಾರೆ. ಸಾರ್ವಜನಿಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣಕ್ಕೆ ಸಂಬಂಧಿಸಿ ಅನೇಕ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ವಿಜ್ಞಾನ ಉಪನ್ಯಾಸಕರನ್ನು ಗುರುತಿಸುವ ಸಲುವಾಗಿ ಜವಾಹರ್‌ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರೀಸರ್ಚ್ ಸೆಂಟರ್ ಪ್ರತಿವರ್ಷ ರಾಷ್ಟ್ರ ಮಟ್ಟದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ.
ಪ್ರಶಸ್ತಿ ಬಂದಿರುವುದು ನನಗೆ ಅತೀವ ಸಂತೋಷ ತಂದಿದೆ. ವಿಜ್ಞಾನ ವಿಷಯ ಬೋಧನೆ, ರೋಬಾಟಿಕ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ನನ್ನ ಗುರಿ. ಈಗ ಸಂದಿರುವ ಪ್ರಶಸ್ತಿ ನನಗೆ ವಿಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಆಸಕ್ತಿಯಿಂದ ಕೆಲಸ ಮಾಡಲು ಪ್ರೋತ್ಸಾಹ ನೀಡಿದೆ ಎಂದು ರೋಹಿತ್ ತಿಳಿಸಿದ್ದಾರೆ.