ದೇಶದ ಹಿತಾಸಕ್ತಿ ಮುಖ್ಯ: ನ್ಯಾಟೊಗೆ ಭಾರತದ ಸೇರ್ಪಡೆ ಪ್ರಸ್ತಾಪ

Nato
Published on

ನ್ಯಾಟೊ ಮಿತ್ರರಾಷ್ಟ್ರಗಳ (ನ್ಯಾಟೊ ಪ್ಲಸ್) ಪಟ್ಟಿಗೆ ಭಾರತವನ್ನೂ ಸೇರ್ಪಡೆಗೊಳಿಸಬೇಕೆಂಬ ಮಹತ್ವದ ಶಿಫಾರಸನ್ನು ಚೀನಾ ಕುರಿತ ಅಮೆರಿಕದ ಉನ್ನತ ಮಟ್ಟದ ಸಮಿತಿ ಮಾಡಿದೆ. ಅಮೆರಿಕ ನೇತೃತ್ವದ ನ್ಯಾಟೊ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಶನ್- ಉತ್ತರ ಅಂಟ್ಲಾಟಿಕ್ ಒಪ್ಪಂದ ಸಂಘಟನೆ) ಪ್ಲಸ್​ಗೆ ಭಾರತ ಸೇರಿದರೆ ಮಿತ್ರರಾಷ್ಟ್ರಗಳ ನಡುವಣ ಯಾವುದೇ ಅಡೆತಡೆ ಇಲ್ಲದೆ ಬೌದ್ಧಿಕ ಜ್ಞಾನ ಮತ್ತು ಕೌಶಲಗಳ ವಿನಿಮಯ ಸುಲಭವಾಗಲಿದೆ. ಜತೆಗೆ, ರಕ್ಷಣಾ ಕ್ಷೇತ್ರದಲ್ಲಿನ ನವೀನ ತಂತ್ರಜ್ಞಾನ ಪಡೆಯಲು ಭಾರತಕ್ಕೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆಗಳು ಗರಿಗೆದರಿವೆ. ನ್ಯಾಟೊ ಮೈತ್ರಿಕೂಟ ಸೇರಿದರೆ ಭಾರತದ ಮೇಲಾಗುವ ಸಾಧಕ-ಬಾಧಕಗಳೇನು ಎಂಬ ಜಿಜ್ಞಾಸೆಗಳು ಸಹಜವಾಗಿ ತಲೆದೋರಿವೆ. ನ್ಯಾಟೊ ಮೈತ್ರಿಕೂಟ ಸೇರುವುದು ಹಲವು ರೀತಿಯ ಸಕಾರಾತ್ಮಕ ಪರಿಣಾಮಗಳನ್ನು ಬೀರಿದರೂ, ಅಷ್ಟೇ ಪ್ರಮಾಣದಲ್ಲಿ ಅಡ್ಡ ಪರಿಣಾಮಗಳು ಉಂಟಾಗುವುದನ್ನು ಅಲ್ಲಗಳೆಯಲಾಗದು.

ಶೀತಲ ಸಮರದ ಸಮಯದಲ್ಲಿ ಭಾರತವು ಯಾವುದೇ ಮಿಲಿಟರಿ ಬಣಕ್ಕೆ (ಅಮೆರಿಕ ನೇತೃತ್ವದ ನ್ಯಾಟೊ ಅಥವಾ ಹಿಂದಿನ ಸೋವಿಯರ್ ರಷ್ಯಾ ನೇತೃತ್ವದ ವಾರ್ಸಾ ಒಪ್ಪಂದ) ಸೇರಲು ನಿರಾಕರಿಸುವ ಮೂಲಕ ಅಲಿಪ್ತ (ತಟಸ್ಥ) ನೀತಿಯನ್ನು ಅನುರಿಸಿಕೊಂಡು ಬಂದಿತು. 1989-91ರ ಅವಧಿಯಲ್ಲಿ ಸೋವಿಯತ್ ರಷ್ಯಾ ಕುಸಿತದೊಂದಿಗೆ ಶೀತಲ ಸಮರ ಕೊನೆಗೊಂಡ ನಂತರ ಅನೇಕ ತಟಸ್ಥ ರಾಷ್ಟ್ರಗಳು ನ್ಯಾಟೊ ಪಾಲುದಾರರಾಗಿವೆ. ನ್ಯಾಟೊದ ಯಾವುದಾದರೂ ಸದಸ್ಯ ರಾಷ್ಟ್ರದ ಮೇಲೆ ಯಾರಾದರೂ ಆಕ್ರಮಣ ಮಾಡಿದರೆ ನ್ಯಾಟೊದ ಎಲ್ಲ ಸದಸ್ಯರು ಅದರ ನೆರವಿಗೆ ಧಾವಿಸಿ ಜಂಟಿ ಮಿಲಿಟರಿ ಕ್ರಮಕ್ಕೆ ಮುಂದಾಗುತ್ತಾರೆ. ಹೀಗಾಗಿ, ಭಾರತವು ನ್ಯಾಟೊ ಸದಸ್ಯನಾದರೆ, ಭಾರತದ ಮೇಲೆ ದಾಳಿ ಮಾಡಲು ಚೀನಾ ಮತ್ತು ಪಾಕಿಸ್ತಾನಕ್ಕೆ ಇದು ದೊಡ್ಡ ಅಡಚಣೆಯಾಗಬಹುದಾಗಿದೆ. ದೀರ್ಘಾವಧಿಯಲ್ಲಿ, ಭಾರತವು ವಿಶ್ವದ ಅತ್ಯಂತ ಶಕ್ತಿಶಾಲಿ ಮೈತ್ರಿಯೊಂದಿಗೆ ಪಾಲುದಾರಿಕೆಯಿಂದ ಮಿಲಿಟರಿ ಕಾರ್ಯತಂತ್ರದ ಪ್ರಯೋಜನಗಳನ್ನು ಪಡೆಯುತ್ತದೆ. ನ್ಯಾಟೊ ಸೇರಿದರೆ ಭಾರತಕ್ಕೆ ಆಗಬಹುದಾದ ಲಾಭದ ಲೆಕ್ಕಾಚಾರಗಳಿವು.

ನ್ಯಾಟೊ ಸದಸ್ಯ ರಾಷ್ಟ್ರಗಳಿಗೆ ರಷ್ಯಾ, ಚೀನಾ ಮತ್ತು ಮಧ್ಯಪ್ರಾಚ್ಯರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧವಿಲ್ಲ. ಭಾರತ ನ್ಯಾಟೊ ಸದಸ್ಯನಾದರೆ, ರಷ್ಯಾದೊಂದಿಗೆ ಇರುವ ಭಾರತದ ದೀರ್ಘಕಾಲದ ಮತ್ತು ಬಲವಾದ ಸಂಬಂಧಗಳು ಹಳಸುತ್ತದೆ. ಅಲ್ಲದೆ, ಚೀನಾ ಮತ್ತು ರಷ್ಯಾ ನಡುವಿನ ಈಗಾಗಲೇ ಆಳವಾಗಿರುವ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಭಾರತವು ಈಗಲೂ ರಷ್ಯಾದ ಮಿಲಿಟರಿ ಉಪಕರಣಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಇನ್ನೂ ಕೆಲವು ಮಹತ್ವದ ಸಂಗತಿಗಳೆಂದರೆ, ಭಾರತವು ನ್ಯಾಟೊ ಸದಸ್ಯನಾದರೆ ತನ್ನ ಭೂಪ್ರದೇಶದಲ್ಲಿ ನ್ಯಾಟೊ ನೆಲೆಗಳನ್ನು ಸ್ಥಾಪಿಸಬೇಕಾಗುತ್ತದೆ. ಇದು ದೇಶದ ಸಾರ್ವಭೌಮತ್ವ ಧಕ್ಕೆ ತರಬಹುದಾಗಿದೆ. ಅಲ್ಲದೆ, ಜಗತ್ತಿನಾದ್ಯಂತ ವಿವಿಧ ಸಂಘರ್ಷಗಳಿಗೆ ಭಾರತವು ಅನಗತ್ಯವಾಗಿ ಎಳೆಯಲ್ಪಡುತ್ತದೆ. ನ್ಯಾಟೊ ಸೇರ್ಪಡೆಯಾದರೆ ಪಾಶ್ಚಿಮಾತ್ಯ ದೇಶಗಳ ಹಿಡಿತವು ಭಾರತದ ಮೇಲೆ ಹೆಚ್ಚುತ್ತದೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಯ ಲಾಭ ಪಡೆದುಕೊಂಡು ಭಾರತವು ವಿಶ್ವದಲ್ಲಿಯೇ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದೆ. ಯೂಕ್ರೇನ್ ಮೇಲೆ ಆಕ್ರಮಣ ಮಾಡಿದ ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಿದ ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ಇಂತಹುದೇ ಕ್ರಮ ಕೈಗೊಳ್ಳಲು ಭಾರತದ ಮೇಲೆಯೂ ಒತ್ತಡ ಹೇರಿದವು. ಆದರೆ, ಭಾರತ ಒತ್ತಡಕ್ಕೆ ಮಣಿಯದೆ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಖರೀದಿಸಿ, ಅದನ್ನು ಸಂಸ್ಕರಿಸಿ ಪಾಶ್ಚಾತ್ಯ ದೇಶಗಳಿಗೇ ಮಾರಾಟ ಮಾಡುವ ಮೂಲಕ ಲಾಭ ಮಾಡಿಕೊಂಡಿತು. ಯಾವುದೇ ಒಕ್ಕೂಟಕ್ಕೆ ಸೇರದೆ ತಟಸ್ಥವಾಗಿದ್ದರೆ ದೇಶದ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net