ಸಮರಕ್ಕೆ ತಿಂಗಳು, ಇನ್ನೂ ಕಾಣದ ಸಂಧಾನದ ದಾರಿ; ರಷ್ಯಾ ದಾಳಿಗೆ ಯೂಕ್ರೇನ್ ಪ್ರತಿರೋಧ..

Ukraine
Published on

ಕಿಯೆವ್/ಮಾಸ್ಕೊ: ಯೂಕ್ರೇನ್ ಮೇಲೆ ರಷ್ಯಾ ಫೆ.24ರಂದು ದಾಳಿ ಆರಂಭಿಸಿದ್ದು, ಒಂದು ತಿಂಗಳು ಪೂರ್ಣವಾಗಿದೆ. ಮೂರನೇ ವಿಶ್ವ ಸಮರದ ಆತಂಕ ಸೃಷ್ಟಿಸಿರುವ ಈ ಯುದ್ಧ ಇನ್ನೂ ಮುಂದುವರಿದಿದೆ. ಯೂಕ್ರೇನ್ ಸಮರಾಂಗಣವಾಗಿದ್ದು, ಸಾಕಷ್ಟು ನಾಶನಷ್ಟಗಳನ್ನು ಅನುಭವಿಸಿದೆ. ಆದರೆ ಅದರ ನಿಖರ ಚಿತ್ರಣ ಇನ್ನೂ ಜಗತ್ತಿಗೆ ಲಭ್ಯವಾಗಿಲ್ಲ ಎಂಬುದು ವಾಸ್ತವ.

ಎರಡನೇ ವಿಶ್ವ ಯುದ್ಧದ ನಂತರದಲ್ಲಿ ಯುರೋಪ್ ಖಂಡದಲ್ಲಿ ನಡೆಯುತ್ತಿರುವ ಅತಿದೊಡ್ಡ ಕದನ ಇದಾಗಿದ್ದು, ತಿಂಗಳು ಕಳೆದರೂ ತೀವ್ರತೆ ಹೆಚ್ಚುತ್ತಿದೆ. ಇದು ಜಗತ್ತಿನ ಕಳವಳವನ್ನು ಹೆಚ್ಚು ಮಾಡಿದೆ. ಉಭಯ ರಾಷ್ಟ್ರಗಳ ನಡುವಿನ ಶಾಂತಿಮಾತುಕತೆ ನಾಲ್ಕಾರು ಸುತ್ತುಗಳನ್ನು ಕಂಡಿದೆಯಾದರೂ ಫಲ ಕಂಡಿಲ್ಲ.

ಯುದ್ಧ ನಿರತ ರಷ್ಯಾ ಮೇಲೆ ಅಮೆರಿಕ ಮತ್ತು ನ್ಯಾಟೋ ಮಿತ್ರ ರಾಷ್ಟ್ರಗಳು ವಿವಿಧ ನಿರ್ಬಂಧಗಳನ್ನು ಹೇರಿವೆ. ಆ ಮೂಲಕ ಯುದ್ಧ ತೀವ್ರತೆ ಕಡಿಮೆ ಮಾಡುವ ಪ್ರಯತ್ನ ನಡೆಸಿವೆ. ಆದರೆ, ಇದಾವುದೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ನಿಲುವನ್ನು ಬದಲಾಯಿಸುವಲ್ಲಿ ಸಫಲವಾಗಿಲ್ಲ. ಯೂಕ್ರೇನ್​ಗೆ ಅಮೆರಿಕ ಮತ್ತು ನ್ಯಾಟೋ ಮಿತ್ರರಾಷ್ಟ್ರಗಳು ಸೇನಾ ಮತ್ತು ಇತರೆ ನೆರವುಗಳನ್ನು ಪೂರೈಸುತ್ತಿದ್ದು, ರಷ್ಯಾಕ್ಕೆ ತಡೆಯೊಡ್ಡುವುದಕ್ಕೆ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ನಡೆಸಿವೆ.

ನಾಗರಿಕರಿಗೆ ಸಂಕಷ್ಟ: ರಷ್ಯಾ-ಯೂಕ್ರೇನ್ ನಾಗರಿಕರು ಈ ಯುದ್ಧದ ಕಾರಣ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಷ್ಯಾ ಮೇಲೆ ಯೂಕ್ರೇನ್ ದಾಳಿ ನಡೆಸಿದ ವರದಿ ಬಂದಿಲ್ಲ. ಆದರೂ, ತೃತೀಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧದ ಕಾರಣ ರಷ್ಯಾ ಜನರ ಬದುಕು ತಲ್ಲಣಗೊಂಡಿದೆ. ಯೂಕ್ರೇನ್ ನಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೇ ಭೀತಿಯಿಂದ 35 ಲಕ್ಷಕ್ಕೂ ಹೆಚ್ಚು ಜನ ನೆರೆ ರಾಷ್ಟ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ರಷ್ಯಾ ಉದ್ದೇಶ ಈಡೇರಿಲ್ಲ: ಅಮೆರಿಕ ಮತ್ತು ನ್ಯಾಟೋ ರಾಷ್ಟ್ರಗಳ ಹಿತಕ್ಕೆ ಪೂರಕವಾಗಿ ನಡೆಯುತ್ತಿರುವ ಯೂಕ್ರೇನ್​ನ ರಾಜಧಾನಿ ಕಿಯೆವ್ ವಶಪಡಿಸಿಕೊಂಡು ಸರ್ಕಾರ ಪತನಗೊಳಿಸುವ ರಷ್ಯಾ ಸರ್ಕಾರದ ಪ್ರಯತ್ನಕ್ಕೆ ಇನ್ನೂ ನಿರೀಕ್ಷಿತ ಫಲ ಸಿಕ್ಕಿಲ್ಲ. ರಷ್ಯಾ ಪರ ಸರ್ಕಾರವನ್ನು ಅಲ್ಲಿ ಸ್ಥಾಪಿಸಿ, ನ್ಯಾಟೋ ರಾಷ್ಟ್ರಗಳು ತನ್ನ ರಾಷ್ಟ್ರದ ಸುತ್ತ ಇರುವುದನ್ನು ತಪ್ಪಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪ್ರಯತ್ನಿಸುತ್ತಿದ್ದಾರೆ.

ಚೆಚೆನ್ಯಾ, ಸಿರಿಯಾ ಮಾದರಿ ತಂತ್ರಗಾರಿಕೆ: ಯೂಕ್ರೇನ್ ಸೇನೆ ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳೊಂದಿಗೆ ಹಿಟ್ ಆಂಡ್ ರನ್ ತಂತ್ರವನ್ನು ಯುದ್ಧದಲ್ಲಿ ಅನುಸರಿಸುತ್ತಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಸೇನೆಯು ಯೂಕ್ರೇನ್ ಪಟ್ಟಣಗಳ ಮೇಲೆ ಸಿರಿಯಾ ಮತ್ತು ಚೆಚೆನ್ಯಾಗಳಲ್ಲಿ ಅನುಸರಿಸಿದ ಯುದ್ಧತಂತ್ರಗಳ ಮೂಲಕ ದಾಳಿ ನಡೆಸುತ್ತಿದೆ. ಯೂಕ್ರೇನ್ ಪಟ್ಟಣಗಳು ಸಂಪೂರ್ಣ ನಾಶಗೊಳಿಸುವ ಈ ತಂತ್ರಗಾರಿಕೆ ಪರಿಣಾಮ, ನಗರಗಳು ಪತನಗೊಳ್ಳುತ್ತಿವೆ.

ಯೂಕ್ರೇನ್​ಗೂ ಹಿನ್ನಡೆ: ರಷ್ಯಾದ ತೀವ್ರ ವಿರೋಧದ ನಡುವೆಯೂ ನ್ಯಾಟೋ ಕೂಟ ಸೇರಬೇಕು ಎಂಬ ಯೂಕ್ರೇನ್ ಆಶಯವೂ ಈಡೇರಿಲ್ಲ. ನ್ಯಾಟೋ ಪಡೆಗಳು ಯೂಕ್ರೇನ್ ರಕ್ಷಣೆ ಬರಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಅಮೆರಿಕ ಮತ್ತು ನ್ಯಾಟೋ ಪಡೆಗಳು ಯೂಕ್ರೇನ್​ಗೆ ಸೇನಾ ನೆರವು ಒದಗಿಸುತ್ತ ದೂರ ನಿಂತುಕೊಂಡಿವೆ. ನೋ ಫ್ಲೈ ಝೋನ್ ಘೋಷಿಸಬೇಕು ಎಂಬ ಯೂಕ್ರೇನ್ ಮನವಿಯನ್ನು ಈ ರಾಷ್ಟ್ರಗಳು ಪುರಸ್ಕರಿಸಿಲ್ಲ.

ದಿನದ ವಿದ್ಯಮಾನ

  • ಜಿ-20 ಶೃಂಗದಲ್ಲಿ ರಷ್ಯಾ ಪಾಲ್ಗೊಳ್ಳುವಿಕೆಯನ್ನು ಬೆಂಬಲಿಸುವುದಾಗಿ ಚೀನಾ ಬುಧವಾರ ಘೋಷಿಸಿದೆ.
  • ತೀರಾ ಅನಿವಾರ್ಯವಲ್ಲದ ಹೊರತು ಅಣ್ವಸ್ತ್ರ ಬಳಸುವುದಿಲ್ಲ. ರಷ್ಯಾದ ಜನರ ಹಿತವನ್ನೂ ಸರ್ಕಾರ ಗಮನಿಸುತ್ತಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್​ಕೋವ್ ತಿಳಿಸಿದ್ದಾರೆ.
  • ಮರಿಯುಪೋಲ್​ನಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದ 15 ಕಾರ್ಯಕರ್ತರನ್ನು ರಷ್ಯಾ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಯೂಕ್ರೇನ್ ಆರೋಪಿಸಿದೆ.
  • ಚೆರ್ನೆಬಿಲ್ ಅಣುಸ್ಥಾವರದಲ್ಲಿದ್ದ ಹೊಸ ಲ್ಯಾಬೊರೇಟರಿ ಯನ್ನು ರಷ್ಯಾ ಸೇನೆ ನಾಶಪಡಿಸಿದೆ ಎಂದು ಯೂಕ್ರೇನ್ ಸೇನಾ ಪಡೆ ಹೇಳಿದೆ.
  • ಯೂಕ್ರೇನ್ ಮಾನವೀಯ ಬಿಕ್ಕಟ್ಟಿನ ವಿಚಾರವಾಗಿ ವಿಶ್ವಸಂಸ್ಥೆಯು ಜನರಲ್ ಅಸೆಂಬ್ಲಿಯಲ್ಲಿ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಿದೆ. ಯೂಕ್ರೇನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಾಯೋಜಿಸಿರುವ ಎರಡು ಮತ್ತು ದಕ್ಷಿಣ ಆಫ್ರಿಕಾ ಪ್ರಾಯೋಜಿತ ಒಂದು ನಿರ್ಣಯ ಒಳಗೊಂಡಿರಲಿದೆ
  • ನ್ಯಾಟೋ ಸಭೆಯಲ್ಲಿ ಭಾಗಿಯಾಗಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಬ್ರುಸೆಲ್ಸ್​ಗೆ ತೆರಳಿದ್ದಾರೆ. ನಂತರ ಅವರು ಪೋಲೆಂಡ್​ಗೆ ಭೇಟಿ ನೀಡಲಿದ್ದಾರೆ
  • ರಷ್ಯಾ-ಯೂಕ್ರೇನ್ ಸಂಘರ್ಷ ಸಂಬಂಧ ವಿಶ್ವಸಂಸ್ಥೆಯ ವಿಶೇಷ ಸಭೆ ನ್ಯೂರ್ಯಾಕ್​ನಲ್ಲಿ ನಡೆಯುತ್ತಿದ್ದು, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ಭಾಗಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net