ಕೊಲೆ ಆರೋಪದಡಿ ಬಿಟೌನ್​ ನಟಿಯ ತಂಗಿ ಅರೆಸ್ಟ್​​; ಈ ಕುರಿತು ನರ್ಗೀಸ್ ಫಕ್ರಿ ರಿಯಾಕ್ಷನ್​ ಹೀಗಿದೆ.. | Nargis Fakhri

Untitled design - 2024-12-03T135348.452
Published on

ಮುಂಬೈ: ಬಾಲಿವುಡ್ ನಟಿ ನರ್ಗೀಸ್ ಫಕ್ರಿ(Nargis Fakhri) ಅವರ ಸಹೋದರಿ ಅಲಿಯಾ ಫಕ್ರಿ ಅವರನ್ನು ನ್ಯೂಯಾರ್ಕ್‌ನ ಕ್ವೀನ್ಸ್ ನಗರದಲ್ಲಿ ಬಂಧಿಸಲಾಗಿದೆ. ಆಕೆಯ ಮಾಜಿ ಪ್ರಿಯಕರ ಮತ್ತು ಆತನ ಸ್ನೇಹಿತೆಯ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಆಕೆಯನ್ನು ಬಂಧಿಸಲಾಗಿದೆ.

ಮಾಹಿತಿಯ ಪ್ರಕಾರ, ನರ್ಗಿಸ್ ಫಕ್ರಿ ಅವರ ಸಹೋದರಿ ಅಲಿಯಾ ಫಕ್ರಿ ತನ್ನ ಮಾಜಿ ಗೆಳೆಯನೊಂದಿಗೆ ಪ್ಯಾಚ್ ಅಪ್ ಮಾಡಲು ಬಯಸಿದ್ದರು. ಆದರೆ ಆಕೆಯ ಮಾಜಿ ಗೆಳೆಯ ಎಡ್ವರ್ಡ್ ಜೇಕಬ್ಸ್ ಮತ್ತೆ ಅವಳೊಂದಿಗೆ ಸಂಬಂಧವನ್ನು ಹೊಂದಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ನರ್ಗೀಸ್ ಸಹೋದರಿ ತನ್ನ ಮಾಜಿ ಪ್ರಿಯಕರ ಹಾಗೂ ಆತನ ಈಗಿನ ಗೆಳತಿ ಎಟಿಯೆನ್ನನ್ನು ಕೊಂದಿದ್ದಾಳೆ.

ಈ ಪ್ರಕರಣದಲ್ಲಿ ಬಾಲಿವುಡ್ ನಟಿ ನರ್ಗೀಸ್ ಸಹೋದರಿ ನ್ಯೂಯಾರ್ಕ್‌ನಲ್ಲಿರುವ ತನ್ನ ಮಾಜಿ ಗೆಳೆಯನ ಮನೆಯ ಗ್ಯಾರೇಜ್‌ಗೆ ಬೆಂಕಿ ಹಚ್ಚಿದ್ದಾಳೆ. ಈ ಬೆಂಕಿಯಲ್ಲಿ ಆಕೆಯ ಮಾಜಿ ಗೆಳೆಯ ಮತ್ತು ಅವರ ಗೆಳತಿ ಮೃತಪಟ್ಟಿದ್ದಾರೆ ಎಂದು ಪ್ರಾಸಿಕ್ಯೂಟರ್ ಹೇಳುತ್ತಾರೆ. ಈ ಘಟನೆಯ ನಂತರ ಪೊಲೀಸರು ನರ್ಗೀಸ್ ಸಹೋದರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕ್ವೀನ್ಸ್ ಡಿಸ್ಟ್ರಿಕ್ಟ್ ಅಟಾರ್ನಿ ಮೆಲಿಂಡಾ ಕಾಟ್ಜ್ ಅವರು, ಆಲಿಯಾ ಫಕ್ರಿ ಮೇಲೆ ನಾಲ್ಕು ಪ್ರಥಮ ಹಂತದ ಕೊಲೆ ಮತ್ತು ಇತರ ಆರೋಪಗಳನ್ನು ಹೊರಿಸಲಾಗಿದೆ ಎಂದು ಹೇಳಿದರು. ಕ್ವೀನ್ಸ್‌ನ ಜಮೈಕಾದಲ್ಲಿರುವ ತನ್ನ ಮಾಜಿ ಗೆಳೆಯನ ಮನೆಯ ಗ್ಯಾರೇಜ್‌ಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿ, ಎಡ್ವರ್ಡ್ ಜೇಕಬ್ಸ್ (35) ಮತ್ತು ಅವನ ಗೆಳತಿ ಅನಸ್ತಾಸಿಯಾ ಎಟಿಯೆನ್ನೆ(33) ಅನ್ನು ಕೊಂದ ಆರೋಪವಿದೆ ಎಂದು ತಿಳಿಸಿದ್ದಾರೆ.

ತನಿಖೆ ಮತ್ತು ಆರೋಪಗಳ ಪ್ರಕಾರ, ಅಲಿಯಾ ಫಕ್ರಿ ಅವರು ಜೇಕಬ್ಸ್‌ನ ಎರಡು ಅಂತಸ್ತಿನ ಮನೆಗೆ ಬೆಳಗ್ಗೆ 6:20ಕ್ಕೆ ಆಗಮಿಸಿದ್ದರು ಮತ್ತು ಬೆಂಕಿ ಹಚ್ಚುವ ಮೊದಲು ನೀವೆಲ್ಲರೂ ಇಂದು ಸಾಯುತ್ತೀರಿ ಎಂದು ಜೋರಾಗಿ ಕೂಗಿದರು ಎಂದು ತಿಳಿಸಲಾಗಿದೆ. ನಂತರ ಆಲಿಯಾ ಕಟ್ಟಡದ ಗ್ಯಾರೇಜ್‌ಗೆ ಬೆಂಕಿ ಹಚ್ಚಿದ್ದಾಳೆ. ಎಟಿಯೆನ್ನೆ ಬೆಂಕಿಯನ್ನು ನೋಡಿದಾಗ ಕಟ್ಟಡದ ಕೆಳಕ್ಕೆ ಓಡಿಹೋದಳು, ಅಲ್ಲಿ ಜೇಕಬ್ಸ್ ಗ್ಯಾರೇಜ್​ನ ಎರಡನೇ ಮಹಡಿಯಲ್ಲಿ ಮಲಗಿದ್ದನು. ಎಟಿಯೆನ್ನೆ ಗೆಳೆಯನನ್ನು ಉಳಿಸಲು ಪ್ರಯತ್ನಿಸಿದರು. ಆದರೆ ಕಟ್ಟಡ ಬೆಂಕಿಗೆ ಆಹುತಿಯಾಗಿದ್ದು, ಇಬ್ಬರೂ ಅಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಗನ ಸಾವಿನ ಬಗ್ಗೆ ಜೇಕಬ್ಸ್ ತಾಯಿ ಹೇಳಿರೊದೇನು?

ಜೇಕಬ್ಸ್‌ನ ತಾಯಿ ಜಾನೆಟ್ ಮಗನ ಸಾವಿನ ಕುರಿತು ಹೇಳಿರುವ ಹೇಳಿಕೆಯನ್ನು ನ್ಯೂಯಾರ್ಕ್ ಪೋಸ್ಟ್‌ ವರದಿ ಮಾಡಿದೆ. ಜೇಕಬ್ಸ್ ಸುಮಾರು ಒಂದು ವರ್ಷದ ಹಿಂದೆ ಅಲಿಯಾ ಫಕ್ರಿಯೊಂದಿಗೆ ಬ್ರೇಕಪ್​ ಮಾಡಿಕೊಂಡಿದ್ದರು. ತಿರಸ್ಕರಿಸಲ್ಪಡುವ ಯಾವುದೇ ವ್ಯಕ್ತಿಯಂತೆ ಅವನು ಅವಳಿಗೆ ನನ್ನಿಂದ ದೂರ ಹೋಗು, ನಾನು ನಿನ್ನಿಂದ ಬೇಸರಗೊಂಡಿದ್ದೇನೆ ಎಂದು ಹೇಳುತ್ತಿದ್ದನು. ಕಳೆದ ಒಂದು ವರ್ಷದಿಂದ ತನ್ನನ್ನು ಒಂಟಿಯಾಗಿ ಬಿಡುವಂತೆ ಹೇಳಲು ಅವನು ಪ್ರಯತ್ನಿಸುತ್ತಿದ್ದನು. ಆದರೆ ಅವನ ನಿರಾಕರಣೆಯನ್ನು ಒಪ್ಪಿಕೊಳ್ಳಲು ಆಲಿಯಾಗೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಮಗಳು ನಿರಪರಾಧಿ ಎಂದ ನರ್ಗೀಸ್ ತಾಯಿ

ನರ್ಗೀಸ್ ಮತ್ತು ಆಲಿಯಾ ಫಕ್ರಿ ಅವರ ತಾಯಿ ತಮ್ಮ ಮಗಳಿಗೂ ಬೆಂಕಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾವಿಸುತ್ತೇನೆ. ಅವಳು ಯಾರನ್ನಾದರೂ ಕೊಲ್ಲುತ್ತಾಳೆ ಎಂದು ನಾನು ಭಾವಿಸುವುದಿಲ್ಲ. ಅವಳು ಎಲ್ಲರನ್ನೂ ನೋಡಿಕೊಳ್ಳುವ ವ್ಯಕ್ತಿ ಎಂದು ಹೇಳಿರುವುದಾಗಿ ನ್ಯೂಯಾರ್ಕ್ ಡೈಲಿ ನ್ಯೂಸ್​ ವರದಿ ಮಾಡಿದೆ.

ತಂಗಿಯ ಆರೋಪದ ಬಗ್ಗೆ ನಟಿ ನರ್ಗೀಸ್ ಹೇಳಿದ್ದೇನು?

ಈ ವಿಷಯದ ಬಗ್ಗೆ ಮಾತನಾಡಲು ಏನೂ ಇಲ್ಲ. 20 ವರ್ಷಗಳಿಂದ ತಂಗಿಯ ಸಂಪರ್ಕದಲ್ಲಿಲ್ಲ. ಉಳಿದವರಂತೆ ನನಗೂ ಈ ಪ್ರಕರಣದ ಬಗ್ಗೆ ಸುದ್ದಿ ನೋಡಿದಾಗಲೆ ತಿಳಿದಿದ್ದು ಎಂದು ಹೇಳಿರುವುದಾಗಿ ನರ್ಗೀಸ್ ಅವರ ಆಪ್ತ ಮೂಲಗಳು ತಿಳಿಸಿವೆ.

ಆನ್‌ಲೈನ್ ಜೈಲು ದಾಖಲೆಗಳ ಪ್ರಕಾರ, ಆಲಿಯಾ ಫಕ್ರಿಯನ್ನು ಮುಂದಿನ ವಿಚಾರಣೆಯವರೆಗೂ ರೈಕರ್ಸ್ ದ್ವೀಪದಲ್ಲಿರುವ ರೋಸ್ ಎಂ. ಸಿಂಗರ್ ಸೆಂಟರ್‌ನಲ್ಲಿ ಇರಿಸಲಾಗಿದೆ. ನ್ಯಾಯಾಲಯದಲ್ಲಿ ಅವರ ಮುಂದಿನ ವಿಚಾರಣೆ ಡಿಸೆಂಬರ್ 9 ರಂದು ನಡೆಯಲಿದೆ. ಆದರೆ ಆಲಿಯಾ ಆರೋಪಗಳಿಗೆ ತಾನು ನಿರಪರಾಧಿ ಎಂದು ಹೇಳಿದ್ದಾರೆ. ಆದರೆ ಈ ಪ್ರಕರಣದಲ್ಲಿ ನ್ಯಾಯಾಲಯ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.(ಎಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net