

ಬೆಂಗಳೂರು: ತೆಲುಗಿನ ನಟ ನರೇಶ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ ರಿಯಲ್ ಆಗಿ ವಿವಾಹವಾಗಿದ್ದು, ರೀಲ್ನಲ್ಲೂ ಅದು 'ಮತ್ತೆ ಮದುವೆ' ಆಗಿ ಹೊರಹೊಮ್ಮಿದೆ. ಈಗಾಗಲೇ ತೆರೆಕಂಡು ಪ್ರದರ್ಶನ ಕಂಡಿರುವ ಅವರ 'ಮತ್ತೆ ಮದುವೆ' ಇನ್ನು ಮನೆಮನೆಯಲ್ಲೂ ಕಾಣಸಿಗಲಿವೆ. ಅರ್ಥಾತ್, ಸದ್ಯದಲ್ಲೇ 'ಮತ್ತೆ ಮದುವೆ' ಸಿನಿಮಾ ಒಟಿಟಿಗೆ ಬರಲಿದೆ.
ನರೇಶ್-ಪವಿತ್ರಾ ಲೋಕೇಶ್ ಅಭಿನಯದ ‘ಮತ್ತೆ ಮದುವೆ’ ಚಿತ್ರ ಇದೇ ಜೂ. 23ರಂದು ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಿರಲಿದೆ. ತೆಲುಗಿನಲ್ಲಿ 'ಮಳ್ಳಿಪೆಳ್ಳಿ' ಎಂಬ ಟೈಟಲ್ನಡಿ ಮೇ 26ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಬಳಿಕ ಕನ್ನಡದಲ್ಲಿ 'ಮತ್ತೆ ಮದುವೆ' ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಇದೀಗ ಒಟಿಟಿ ಮೂಲಕ ಮನೆಮನೆಗೂ ಬರಲು ಸಜ್ಜಾಗಿದೆ.
ನರೇಶ್ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ 1973ರಲ್ಲಿ 'ಸೂಪರ್ ಸ್ಟಾರ್' ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಬ್ಯಾನರ್ ಮೂಲಕವೇ ನರೇಶ್ 'ಮತ್ತೆ ಮದುವೆ' ಸಿನಿಮಾ ನರೇಶ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಎಂ.ಎಸ್.ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಜಯಸುಧಾ ಮತ್ತು ಶರತ್ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.