

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ಸದಾ ಆ್ಯಕ್ಟಿವ್ ಇರುತ್ತಾರೆ. ರಾಜಕೀಯಯ ಹೊರತಾಗಿ ಸಾಕಷ್ಟು ಆಸಕ್ತಿಕರ ಸಂಗತಿಗಳನ್ನು ಆಗಾಗ್ಗೇ ಶೇರ್ ಮಾಡುತ್ತಿರುತ್ತಾರೆ. ಇದೀಗ ಕರ್ನಾಟಕದ ಬಾಲಕಿಯೊಬ್ಬಳು ಕೀರ್ಬೋರ್ಡ್ ನುಡಿಸುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇತ್ತೀಚೆಗೆ ಅನಂತ್ ಕುಮಾರ್ ಎಂಬುವವರು ಶಾಲ್ಮಲಿ ಎಂಬ ಬಾಲಕಿ ಕೀಬೋರ್ಡ್ ನುಡಿಸುತ್ತಾ, ತಾಯಿಯೊಂದಿಗೆ ಹಾಡು ಹೇಳುತ್ತಿರುವ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದೀಗ ಬಾಲಕಿಯ ಪ್ರತಿಭೆಗೆ ಪ್ರಧಾನಿ ಮೋದಿ ಮನಸೋತಿದ್ದು, ವಿಡಿಯೋ ಶೇರ್ ಮಾಡಿದ್ದಾರೆ.
ಬಾಲಕಿ ಶಾಲ್ಮಲಿ ಕೀಬೋರ್ಡ್ ನುಡಿಸುತ್ತಾ, ಹಾಡು ಹೇಳುತ್ತಿರುವ ವಿಡಿಯೋ ಶೇರ್ ಮಾಡಿರುವ ಪ್ರಧಾನಿ, "ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗು ಸೃಜನಶೀಲತೆ ಹೊಂದಿರುವ ಶಾಲ್ಮಲಿಗೆ ಶುಭಹಾರೈಕೆಗಳು!" ಎಂದು ಹಾರೈಸಿದ್ದಾರೆ.
ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಹಾಡನ್ನು ಶಾಲ್ಮಲಿ ತಾಯಿಯೊಂದಿಗೆ ಹಾಡುತ್ತಾ, ಕೀಬೋರ್ಡ್ ನುಡಿಸಿದ್ದಾಳೆ. ತಾಯಿ ಹಾಡಿನ ಸಾಲುಗಳನ್ನು ಹೇಳುತ್ತಿದ್ದಂತೆ ಬಾಲಕಿ ಕೂಡ ಧ್ವನಿಗೂಡಿಸಿ, ಕೀಬೋರ್ಡ್‌ನಲ್ಲಿ ಆ ಹಾಡನ್ನು ನುಡಿಸಿದ್ದಾಳೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.