ಮಾದಕ ವಸ್ತುಗಳ ಮಾರಾಟ ತಡೆಗೆ ತಂಡ

ganja
ಚಿಕ್ಕಮಗಳೂರು ಪೊಲೀಸರು ಇತ್ತೀಚೆೆಗೆ ವಶಪಡಿಸಿಕೊಂಡಿರುವ ಗಾಂಜಾ.
Published on

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು ಸೇರಿದಂತೆ ವಿವಿಧ ಕಡೆ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ಕಡಿವಾಣಕ್ಕೆ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿದೆ.

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದೇವರಮನೆ ಬೆಟ್ಟ , ಮುತ್ತೋಡಿ ಅಭಯಾರಣ್ಯ, ಹಿರೇಕೊಳಲೆ ಕೆರೆ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ, ಕುದುರೆಮುಖ ಚಾರಣ ಸ್ಥಳಗಳು ಸೇರಿದಂತೆ ಪ್ರಮುಖ ಧಾರ್ಮಿಕ ಪ್ರವಾಸಿ ಸ್ಥಳಗಳು ಇವೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಗಾಂಜಾ ಮಾರಾಟಗಾರರನ್ನು ಬಂಧಿಸುತ್ತಿದ್ದಾರೆ.
ಗಾಂಜಾ ಮಾರಾಟ ತಡೆಗಟ್ಟಲು ಈ ಹಿಂದಿನ ಎಸ್ಪಿ ಅಕ್ಷಯ್ ಅಧಿಕಾರದ ಅವಧಿಯಲ್ಲಿ ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದರು. ಸದ್ಯ ಎಸ್ಪಿ ಉಮಾ ಪ್ರಶಾಂತ್ ಸಹ ತಂಡಗಳನ್ನು ರಚಿಸಿದ್ದು, ಪ್ರವಾಸಿ ತಾಣಗಳಿಗೆ ತೆರಳುವ ಕಾರು, ದ್ವಿಚಕ್ರ ವಾಹನಗಳ್ನು ತಪಾಸಣೆ ನಡೆಸಿ ಬಿಡಲಾಗುತ್ತಿದೆ. ಪ್ರವಾಸಿ ತಾಣಗಳಿಗೆ ಅನುಮತಿಯಿಲ್ಲದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ ಚೆಕ್ ಪೋಸ್ಟ್‌ನಲ್ಲೇ ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಝರಿ ಫಾಲ್ಸ್ ರಸ್ತೆಯ ಕೈಮರ ಸಮೀಪ ಹಾಗೂ ಕುದುರೆಮುಖ ಚಾರಣ ರಸ್ತೆಯಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆದಿದ್ದು ಪೊಲೀಸರು, ಹೋಂ ಗಾರ್ಡ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಮುಳ್ಳಯ್ಯನಗಿರಿ ಬೆಟ್ಟಕ್ಕೆ ಹೋಗಲು ಕೈಮರ ರಸ್ತೆ ಬಿಟ್ಟು ಮತ್ತೊಂದು ಪರ್ಯಾಯ ರಸ್ತೆ ಸಹ ಇದೆ. ಚಿಕ್ಕಮಗಳೂರಿನಿಂದ ಉಪ್ಪಳ್ಳಿ, ಹಳ್ಳೆನಹಳ್ಳಿ, ಹಿರೆಕೊಳಲೆ, ಕಲ್ಲುದೊಡ್ಡಿ, ಬ್ಯಾಗದಳ್ಳಿ ಮಾರ್ಗದಲ್ಲೂ ಗಿರಿ ಪ್ರದೇಶಕ್ಕೆ ತೆರಳಬಹುದು. ಹಿರೆಕೊಳಲೆಯಿಂದ ಗಿರಿಗೆ ಹೋಗುವ ರಸ್ತೆಯಲ್ಲಿ ಯಾವುದೇ ಚೆಕ್‌ಪೋಸ್ಟ್ ಇಲ್ಲ. ಜತೆಗೆ ಈ ರಸ್ತೆಯಲ್ಲಿ ಎಲ್ಲೂ ಪೊಲೀಸರ ಬೀಟ್ ಇರುವುದಿಲ್ಲ. ಇದನ್ನು ಅರಿತಿರುವ ಗಾಂಜಾ ಮಾರಾಟಗಾರರು ಸುಲಭವಾಗಿ ತೆಗೆದುಕೊಂಡು ಹೋಗಿ ಆಯ್ದ ಭಾಗಗಳಲ್ಲಿ ಮಾರಾಟ ಮಾಡುತ್ತಾರೆ.
ರೈಲಿನಲ್ಲಿ ಸಾಗಣೆ: ಆಂಧ್ರ ಪ್ರದೇಶದಿಂದ ಜಿಲ್ಲೆಗೆ ಗಾಂಜಾ ಸರಬರಾಜು ಆಗುತ್ತದೆ ಎಂಬ ಮಾಹಿತಿಯಿದೆ. ಬಸ್‌ಗಳಲ್ಲಿ ತೆಗೆದುಕೊಂಡು ಬಂದರೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ರೈಲಿನಲ್ಲಿ ಆಗಮಿಸಿ ಸ್ಥಳೀಯ ಮಾರಾಟಗಾರರಿಗೆ ಸೂಚಿಸಿರುವ ಸ್ಥಳಗಳಲ್ಲಿ ನೀಡಲಾಗುತ್ತಿದೆ. ನಂತರ ಅವರು ಅಲ್ಲಿಂದ ತೆಗೆದುಕೊಂಡು ಹೋಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಬೇಡಿಕೆಗೆ ತಕ್ಕಂತೆ ತರಿಸಿಕೊಳ್ಳುತ್ತಾರೆ. ಕಡೂರು, ಚಿಕ್ಕಮಗಳೂರಿನಲ್ಲಿ ರೈಲ್ವೆ ನಿಲ್ದಾಣಗಳು ಇವೆ. ಇಲ್ಲಿಗೆ ರೈಲುಗಳಿಂದ ಆಂಧ್ರ ಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ ಯಾರಿಗೂ ಅನುಮಾನ ಬಾರದಂತೆ ಗಾಂಜಾ ತರುತ್ತಾರೆ.
ಜಾಗೃತಿ ವಿಶೇಷ ಕಾರ್ಯಕ್ರಮ: ಈ ಹಿಂದೆ ಎಸ್ಪಿ ಅಕ್ಷಯ್‌ಕುಮಾರ್ ಅವಧಿಯಲ್ಲಿ ಗಾಂಜಾ ಮಾರಾಟ ತಡೆಗಟ್ಟಲು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದರು. ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಗಾಂಜಾ ಮಾರಾಟ ಮಾಡುವವರನ್ನು ಹಿಡಿದು ಪ್ರಕರಣ ದಾಖಲಿಸುತ್ತಿದ್ದರು. ಈ ಜಾಲದಲ್ಲಿ ಭಾಗಿಯಾಗಿದ್ದ ಆಂಧ್ರ ಪ್ರದೇಶದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ಸ್ಥಳೀಯವಾಗಿ ಗಾಂಜಾ ಮಾರಾಟಕ್ಕೆ ಬ್ರೇಕ್ ಹಾಕಿದ್ದರು. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ತಡೆ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯನ್ನು ಮಾದಕ ವಸ್ತುಗಳಿಂದ ಮುಕ್ತವಾಗಿಸಲು ಆಂದೋಲನ ರೀತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಮಾಹಿತಿ ನೀಡಿದರೆ ಹೆಸರು ಗೌಪ್ಯ: ಟೋಲ್ ಫ್ರೀ ಸಂಖ್ಯೆ 1908ಗೆ ಕರೆ ಮಾಡಿ ಮಾದಕ ವಸ್ತುಗಳಿಗೆ ಸಂಬಂಧಿತ ಮಾಹಿತಿ ಅಥವಾ ದೂರುಗಳನ್ನು ನೀಡಬಹುದು. ಇದಕ್ಕೆ ದೂರವಾಣಿ ಕರೆ ಮಾಡಿದವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ. ಗಾಂಜಾ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯ 81 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಕಠಿಣ ಶಿಕ್ಷೆ: ಮಾದಕ ವಸ್ತುಗಳ ಸೇವನೆ ಮಾಡಿರುವ ಅನುಮಾನ ಬಂದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸೇವನೆ ಮಾಡಿರುವುದು ದೃಢಪಟ್ಟಲ್ಲಿ ಅವರ ವಿರುದ್ಧ 27(ಬಿ) ಎಸ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಆರು ತಿಂಗಳು ಸೆರೆವಾಸ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಮಾಡಿದವರಿಗೆ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು.
143 ಪ್ರಕರಣ ದಾಖಲು: 2021ರಲ್ಲಿ 23 ಪ್ರಕರಣ ದಾಖಲಾಗಿದ್ದು, ಆಪೈಕಿ 20 ಪ್ರಕರಣದಲ್ಲಿ 39 ಮಂದಿ ವಿರುದ್ಧ ದೂರು ದಾಖಲಿಸಿ, 212 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸೇವನೆ ಮಾಡುತ್ತಿದ್ದ 3 ಪ್ರಕರಣದಲ್ಲಿ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2022ರಲ್ಲಿ 266 ಪ್ರಕರಣ ದಾಖಲಾಗಿದ್ದು, ಆಪೈಕಿ 18 ಪ್ರಕರಣದಲ್ಲಿ 33 ಮಂದಿ ವಿರುದ್ಧ ದೂರು ದಾಖಲಿಸಿ, 16 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸೇವನೆ ಮಾಡುತ್ತಿದ್ದ 248 ಪ್ರಕರಣದಲ್ಲಿ 253 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2023ರ ಸಾಲಿನಲ್ಲಿ ಇದುವರೆಗೂ 143 ಪ್ರಕರಣ ದಾಖಲಾಗಿದ್ದು, 13 ಪ್ರಕರಣದಲ್ಲಿ 26 ಮಂದಿ ವಿರುದ್ಧ ದೂರು ದಾಖಲಿಸಿ, 15 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸೇವನೆ ಮಾಡುತ್ತಿದ್ದ 130 ಪ್ರಕರಣದಲ್ಲಿ 144 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಯುವಕರು ಮಾದಕ ವಸ್ತುಗಳಿಗೆ ದಾಸರಾಗದೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕಾಲೇಜುಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇರಿಸಲಾಗಿದ್ದು, ಮಾರಾಟ ಮಾಡುವವರ ಮಾಹಿತಿ ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net