ನಂಜನಗೂಡಿನಲ್ಲಿ ತಯಾರಾಗಲಿದೆ ಕರೊನಾಗೆ ಔಷಧ...!

Jubilant
Published on

ಬೆಂಗಳೂರು: 'ಸೂಪರ್​ಸ್ಪ್ರೆಡರ್​' ಹಣೆಪಟ್ಟಿಯೊಂದಿಗೆ ಕರೊನಾ ಹಂಚಿದ ಕುಖ್ಯಾತಿಗೆ ಕಾರಣವಾಗಿದ್ದ ಮೈಸೂರು ಜಿಲ್ಲೆ ನಂಜನಗೂಡಿನ ಜುಬಿಲೆಂಟ್​ ಲೈಫ್​ ಸೈನ್ಸ್​ ಔಷಧ ಕಾರ್ಖಾನೆಯಲ್ಲಿ ಕರೊನಾಗೆ ಲಸಿಕೆ ಸಿದ್ಧವಾಗಲಿದೆ.

ಅಮೆರಿಕದ ಗಿಲಿಯಾಡ್​ ಸೈನ್ಸ್​ ಕಂಪನಿಯೊಂದಿಗೆ ಜುಬಿಲೆಂಟ್​ ಈಗಾಗಲೇ ನಾನ್​-ಎಕ್ಸ್​ಕ್ಲುಸಿವ್​ ಲೈಸೆನ್ಸಿಂಗ್​ ಒಪ್ಪಂದಕ್ಕೆ ಸಹಿ ಹಾಕಿದೆ. ಗಿಲಿಯಾಡ್​ನ 'ರೆಮ್​ಡೆಸಿವಿರ್​' ಲಸಿಕೆಯನ್ನು ಭಾರತವೂ ಸೇರಿ 127 ದೇಶಗಳಲ್ಲಿ ಮಾರಾಟ ಹಾಗೂ ತಯಾರಿಕೆ ಹಕ್ಕುಗಳನ್ನು ಪಡೆದುಕೊಂಡಿದೆ.

ರೆಮ್​ಡೆಸಿವಿರ್​ ಲಸಿಕೆಯನ್ನು ಚೀನಾದಲ್ಲಿ ಕರೊನಾ ಸೋಂಕಿತರ ಮೇಲೆ ಬಳಸಲಾಗಿತ್ತು. ರೋಗಿಗಳು ಚೇತರಿಸಿಕೊಳ್ಳುವ ಅವಧಿಯನ್ನು ಈ ಲಸಿಕೆ ಗಮನಾರ್ಹವಾಗಿ ಕಡಿಮೆಗೊಳಿಸಿದೆ ಎಂಬುದು ಅಧ್ಯಯನದಲ್ಲಿ ಗೊತ್ತಾಗಿತ್ತು. ಹೀಗಾಗಿ ಕೋವಿಡ್​-19 ಪೀಡಿತರಿಗೆ ರೆಮ್​ಡೆಸಿವಿರ್​ ಲಸಿಕೆಯನ್ನು ಬಳಸಬಹುದು ಎಂದು ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಶಿಫಾರಸು ಮಾಡಿದೆ.

ಜುಬಿಲೆಂಟ್​ ಈ ಲಸಿಕೆಯನ್ನು ಬಹುತೇಕ ಎಲ್ಲ ಕಡಿಮೆ ಆದಾಯದ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಹಾಗೂ ಕೆಲ ಮುಂದುವರಿದ ರಾಷ್ಟ್ರಗಳಲ್ಲೂ ತಯಾರಿಸಿ ಮಾರಾಟ ಮಾಡುವ ಹಕ್ಕುಗಳನ್ನು ಪಡೆದುಕೊಂಡಿದೆ. ಭಾರತದಲ್ಲಿ ರೆಮ್​ಡೆಸಿವಿರ್​ ಲಸಿಕೆ ಉತ್ಪಾದನೆಗೆ ಸಂಬಂಧಿಸಿದಂತೆ ದೀರ್ಘಕಾಲಿಕ ಪರವಾನಗಿ ಒಪ್ಪಂದಗಳನ್ನು ಮಾಡಿಕೊಳ್ಳಲು ಹಲವು ಕಂಪನಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಗಿಲಿಯಾಡ್​ ಇತ್ತೀಚೆಗಷ್ಟೇ ಮಾಹಿತಿ ನೀಡಿತ್ತು.

ಸದ್ಯ ಕೋವಿಡ್​ಗೆ ಯಾವುದೇ ಔಷಧ ತಯಾರಾಗದ ಹಿನ್ನೆಲೆಯಲ್ಲಿ ಈ ಲಸಿಕೆಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಈ ಕಾರಣದಿಂದಾಗಿ 2022ರ ವೇಳೆಗೆ ಎಲ್ಲ ರಾಷ್ಟ್ರಗಳಲ್ಲೂ ರೆಮ್​ಡೆಸಿವಿರ್​ ಉತ್ಪಾದನೆಗೆ ಗಿಲಿಯಾಡ್​ ಕಂಪನಿ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net