ಕರೊನಾ ವೇಳೆ ಮನೆಯಲ್ಲಿ ಇರುವ ಮಕ್ಕಳ ವಿಚಿತ್ರ ಕೋಪತಾಪ ಕಡಿಮೆ ಮಾಡುವುದು ಹೇಗೆ?

nandondu
Published on

ಪ್ರಶ್ನೆ: ಕರೊನಾ ಸಂಕಷ್ಟದಿಂದ ಶಾಲೆಯಿಲ್ಲದೇ ಮನೆಯಲ್ಲೇ ಇರುವ ಹದಿವಯಸ್ಸಿನ ಮಕ್ಕಳು ವಿಚಿತ್ರ ಕೋಪತಾಪಗಳಿಂದ ಬಳಲುತ್ತಿದ್ದಾರೆ, ಹತಾಶೆಯ ಸ್ಥಿತಿ ತಲುಪಿ ತಂದೆತಾಯಿಯರಿಗೆ ತಲೆನೋವು ತರುತ್ತಿದ್ದಾರೆ ಮತ್ತು ಆತ್ಮಹತ್ಯೆಯ ಮಾತಾಡುತ್ತಾರೆ. ಇಂಥವರನ್ನು ಸಂಭಾಳಿಸಲು ಕಷ್ಟವಾಗುತ್ತಿದೆ. ತಮ್ಮ ಶಾಲೆಯ ಯಾವುದೋ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡನೆಂದು ಇವರು ದಿನವಿಡೀ ಅಳುತ್ತಾರೆ. ಇವರನ್ನು ಹೇಗೆ ಸಮಾಧಾನ ಮಾಡುವುದು? ಹೇಗೆ ಸಂತೋಷವಾಗಿಟ್ಟುಕೊಳ್ಳುವುದು ? ಎನ್ನುವ ಪ್ರಶ್ನೆಯನ್ನು ಹಲವರು ನನಗೆ ಮೇಲ್ ಮೂಲಕ ಮತ್ತು ಕಾಗದಗಳಲ್ಲಿ ಬರೆದಿದ್ದಾರೆ. ಅವರೆಲ್ಲರಿಗೂ ಸೇರಿಸಿ ಈ ಮನಸ್ಥಿತಿಯನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಮತ್ತು ಮಕ್ಕಳಿಗೆ ತಮ್ಮನ್ನು ತಾವು ಸರದಾರಿಯಲ್ಲಿ ನಡೆಯಲು ಯೋಚಿಸುವಂತೆ ಮಾಡಲು ಈ ಲೇಖನವನ್ನು ಬಳಸಿಕೊಳ್ಳುತ್ತಿದ್ದೇನೆ.

ಆತ್ಮಹತ್ಯೆಯ ಬಗ್ಗೆ ತಿಳಿಯ ಬೇಕಾದ ಮನೋವೈಜ್ಞಾನಿಕ ಸತ್ಯಗಳು – ಆರೋಗ್ಯಮನಸ್ಸಿನ ಹುಡುಗ ಅಥವಾ ಹುಡುಗಿಯನ್ನು “ ನೀನೊಬ್ಬ/ಳು ನಿಷ್ಪ್ರಯೋಜಕ/ಕಿ ನಿನ್ನಿಂದ ಯಾರಿಗೂ ಪ್ರಯೋಜನವಿಲ್ಲ “ ಎಂದು ಯಾರಾದರೂ ( ಅಪ್ಪ ಅಥವಾ ಅಮ್ಮ) ಬೈದರೆ ತಕ್ಷಣ ಅವರು ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಆರೋಗ್ಯವಾದ ಮನಸ್ಸು ’ ಇವರು ಯಾಕೆ ಹೀಗೆಂದರು? ನನ್ನ ಬದುಕು ನಿಷ್ಪ್ರಯೋಜನವೇ?’ ಎಂದು ತಕ್ಷಣ ಪ್ರಶ್ನಿಸಿಕೊಳ್ಳುತ್ತದೆ. ಆತ್ಮಬಲ ಚೆನ್ನಾಗಿರುವವರು, ’ ನನ್ನಪ್ಪ ಅಥವಾ ನನ್ನಮ್ಮ ತಾನೆ ಏನೋ ಬೇಸರದಲ್ಲಿ ಹಾಗೆಂದಿದ್ದಾರೆ ’ ಎಂದು ಸಮಾಧಾನ ಮಾಡಿಕೊಂಡರೂ, ಹೊರಗೆ ಕೋಪ ಅಥವಾ ದುಃಖ ಪ್ರದರ್ಶಿಸಬಹುದು. ಅದಕ್ಕಿಂತಾ ಮುಂದೆ ಈ ವಿಷಯ ಬೆಳೆಯುವುದಿಲ್ಲ. ಆದರೆ ಬಾಲ್ಯದಿಂದಲೇ ’ ನೀನು ಉಪಯೋಗವಿಲ್ಲದವ, ನಿನ್ನಿಂದ ಏನೂ ಆಗುವುದಿಲ್ಲ ’ ಎನ್ನುವ ಮಾತುಗಳನ್ನು ಹತ್ತು ಹಲವು ಕಡೆಗಳಿಂದ( ಶಾಲೆಯಲ್ಲಿ ಉಪಾಧ್ಯಾಯರು, ಸ್ನೇಹಿತರು, ಮನೆಯಲ್ಲಿ ಹೆತ್ತವರು ಇತ್ಯಾದಿ ) ಕೇಳುತ್ತಲೇ ಬೆಳೆದ ಮಕ್ಕಳಿಗೆ ಒಂದು ರೀತಿಯ ದೋಷಯುಕ್ತವಾದ ಆತ್ಮವಿಶ್ವಾಸ ಬೆಳೆದಿರುತ್ತದೆ. ಇದು ಮೊದಲ ಹಂತ. ಎರಡನೆ ಸಂದೇಶವಾಗಿ ಇಂಥಾ ಮಕ್ಕಳಿಗೆ ’ ಹೋಪ್ ಲೆಸ್ ’ ಎನ್ನುವ ಸಂದೇಶ ರವಾನೆಯಾಗುತ್ತದೆ. “ ಇವನನ್ನು ಅಥವಾ ಇವಳನ್ನು ನಂಬಲು ಆಗುವುದಿಲ್ಲ, ಇವರಿಗೆ ಹೇಳಿದ ಕೆಲಸ ಸರಿಯಾಗಿ ಆಗುವುದಿಲ್ಲ “ ಇಂಥಾ ಅಪನಂಬಿಕೆಯ ಮಾತುಗಳನ್ನು ಈ ಮಕ್ಕಳು ಕೇಳುತ್ತಿದ್ದರೆ ಅವರಿಗೆ ಅವರಲ್ಲೇ ನಂಬಿಕೆ ಹೋಗಿಬಿಡುತ್ತದೆ. ಈ ಎರಡು ಒಳಗುದಿಗಳಿಂದ ಮನಸ್ಸು ಒಂದು ಸಣ್ಣ ಹೀನಾಯವಾದ ಮಾತು ಕೇಳಿದರೂ ’ ಈ ಜಗತ್ತು ನನಗೆ ಬದುಕಲು ಯೋಗ್ಯವಲ್ಲ ’ ಎನ್ನುವ ಕೊನೆಯ ಹಂತಕ್ಕೆ ತಲುಪಿಬಿಡುತ್ತದೆ. ಇದನ್ನೇ ಮನೋವಿಜ್ಞಾನ ’ ಖಿನ್ನತೆ ’ ಎಂದು ಕರೆಯುತ್ತದೆ.

ಆತ್ಮಹತ್ಯೆಯ ಬಗ್ಗೆ ಸಮಾಜದಲ್ಲಿರುವ ತಪ್ಪು ತಿಳಿವಳಿಕೆಗಳು –
೧ ’ ಸಾಯುವವರು ಯಾರಿಗೂ ಹೇಳುವುದಿಲ್ಲ. ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ’ ಇದು ಸತ್ಯವಲ್ಲ. ಖಿನ್ನತೆ ಪ್ರಾರಂಭದಲ್ಲೇ ಅವರು ಹಲವು ಸೂಚನೆಗಳನ್ನು ಕೊಡುತ್ತಾರೆ. ಯಾರಾದರೂ ಬಯ್ದಾಗ “ ನಾನು ಸತ್ರೆ ನೀವೆಲ್ಲಾ ಸುಖವಾಗಿರ್ತೀರ ಅಲ್ವ “ ಎಂದು ಉತ್ತರ ಕೊಟ್ಟಿರುತ್ತಾರೆ. ಇದನ್ನು ಮನೆಯವರು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ.

೨ ’ ನಗುನಗುತ್ತಾ ಚೆನ್ನಾಗಿಯೇ ನಟನೆ ಮಾಡಿ ನಂತರ ಇದ್ದಕ್ಕಿದ್ದಂತೆ ಸಾಯುತ್ತಾರೆ ’ ಇದನ್ನೂ ಸಂಪೂರ್ಣ ನಂಬಲಾಗುವುದಿಲ್ಲ. ಮನಸ್ಸಿನಲ್ಲಿ ಹೊಯ್ದಾಟವಾಗುತ್ತಿರುವ ವ್ಯಕ್ತಿ ಉದಾಸೀನವಾಗಿಯೋ, ಎಲ್ಲದರಲ್ಲೂ ನಿರಾಸಕ್ತಿಯಿಂದಲೋ ಇರುತ್ತಾರೆ. ಇಂಥಾ ಸ್ಥಿತಿಯನ್ನು ಮನೆಯವರು ಗಮನಿಸುವುದಿಲ್ಲ. ಅಥವಾ ಗಮನಿಸಿದರೂ ’ ಎರಡು ದಿನಗಳಲ್ಲಿ ಸರಿಹೋಗಬಹುದು ’ ಎಂದು ಭಾವಿಸಿ ಸುಮ್ಮನಾಗುತ್ತಾರೆ. ಅಥವಾ “ ಏನಾಗಿದೆ ನಿಂಗೆ? ಆಕಾಶ ತಲೆಮೇಲೆ ಬಿದ್ದಂತೆ ಯಾಕಿದೀ? ಸರಿಯಾಗಿ ಇರಬಾರದಾ “? ಎಂದು ಬಯ್ದು ಅವರ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತಾರೆ.

೩ ’ ಹೇಡಿಗಳು ಮಾತ್ರ ಸಾಯುತ್ತಾರೆ. ಅವರಿಗೆ ಬದುಕಿ ಜೀವನವನ್ನುಮತ್ತು ಸಮಸ್ಯೆಗಳನ್ನು ಎದುರಿಸುವ ಧೈರ್ಯವಿಲ್ಲ ’ ಇದೂ ಸುಳ್ಳು. ಸಾಯುವುದಕ್ಕೂ ತುಂಬಾ ಧೈರ್ಯ ಬೇಕು. ಕಾಫಿಯ ಲೋಟ ಬಿಸಿಯಾಗಿದ್ದು ಗೊತ್ತಿಲ್ಲದೇ ಹಿಡಿದರೆ ತಕ್ಷಣ ಕೆಳಗಿಟ್ಟು ಕೈಗೆ ಉಫ್ ಎಂದು ಗಾಳಿಹಾಕಿಕೊಳ್ಳುತ್ತೇವೆ. ಗಟಗಟನೆ ನೀರು ಕುಡಿಯುವಾಗ ಎರಡು ಗುಟುಕು ಹೆಚ್ಚುಗೆ ಒಮ್ಮೆಲೇ ಗಂಟಲಿಗೆ ಹೋದರೆ ತೇಲುಗಣ್ಣು ಮೇಲುಗಣ್ಣಾಗುತ್ತದೆ. ಯಾದರೂ ತಮಾಷೆಗೆ ಗಂತಲನ್ನು ಒತ್ತಿ ಹಿಡಿದರೆ ಕುಯ್ಯೋಮರ್ರೋ ಎಂದು ಕಿರುಚುತ್ತೇವೆ. ನಿಜದ ಪರಿಸ್ಥಿತಿಗಳು ಹೀಗಿರುವಾಗ, ಬೆಂಕಿಯಲ್ಲಿ ಬಿದ್ದು, ನೀರಿನಲ್ಲಿ ಮುಳುಗಿ, ನೇಣಿಗೆ ಕುತ್ತಿಗೆಕೊಟ್ಟು ಸಾಯುವುದು ಸುಲಭವೇ? ಮನಸ್ಸು ವಿಪರೀತ ಖಿನ್ನತೆಗೆ ಹೋದಾಗ ಮಾತ್ರ ಆ ಕಷ್ಟದ ಅರಿವು ಹಾರಿಹೋಗಿರುತ್ತದೆ. ಜೀವ ತೆಗೆದುಕೊಳ್ಳುವುದೊಂದೇ ಮುಖ್ಯವಾಗಿಬಿಡುತ್ತದೆ.

ಈ ಹಂತದಲ್ಲಿ ಪೋಷಕರ ಪಾತ್ರ – ದಯವಿಟ್ಟು ನಿಮ್ಮ ಮಕ್ಕಳು ಸ್ವಲ್ಪ ಖಿನ್ನತೆಯ ಲಕ್ಷಣ ತೋರಿಸಿದರೂ ಜಾಗೃತರಾಗಿ. ಅವರ ತಪ್ಪುಗಳನ್ನು ಕ್ಷಮಿಸುತ್ತಾ ಭರವಸೆಯ ಮಾತುಗಳನ್ನಾಡಿ. “ ನಿನ್ನ ಇರುವಿಕೆಯೇ ನನಗೆ ಮುಖ್ಯ ನಿನ್ನ ಮಾರ್ಕ್ಸ್ ಆಗಲೀ, ನಿನ್ನ ಕೆಲಸಗಳಾಗಲೀ, ನಿನ್ನಲ್ಲಿರುವ ದೌರ್ಬಲ್ಯಗಳಾಗಲೀ ಯಾವುದೂ ಮುಖ್ಯವೂ ಅಲ್ಲ, ಯಾವುದೂ ಶಾಶ್ವತವೂ ಅಲ್ಲ. ನೀನು ಅಧಿಕಾರಿಯಾಗಿ, ಹೆಚ್ಚುಹಣ ಸಂಪಾದಿಸಿ, ನಮ್ಮನ್ನು ನೋಡಿಕೊಳ್ಳುತ್ತೀ ಎಂದು ನಿನ್ನನ್ನು ನಾವು ಸಾಕುತ್ತಿಲ್ಲ. ನೀನೊಬ್ಬ ಒಳ್ಳೆಯ ವ್ಯಕ್ತಿಯಾದರೆ ಇವೆಲ್ಲವೂ ನಮಗೆ ಬಂದಂತೆ” ಈ ವಿಷಯವನ್ನು ನೀವು ಮೊದಲು ನಂಬಿ. ಮತ್ತು ಮಕ್ಕಳೂ ನಂಬುವ ಹಾಗೆ ನಡೆದುಕೊಳ್ಳಿ. ಮಕ್ಕಳ ಸುಸೂಕ್ಷ್ಮ ಮನಸ್ಸನ್ನು ಅರ್ಥಮಾಡಿಕೊಳ್ಳುವ ತಂದೆತಾಯಿಯರ ಅಗತ್ಯ ಇಂದಿನ ಸಮಾಜಕ್ಕೆ ಬಹಳವಾಗಿದೆ.

ಲಾಕ್‍ಡೌನ್ ಸ್ಥಿತಿಯಲ್ಲಿ ಹದಿವಯಸ್ಸಿನ ಮಕ್ಕಳು ತೀರಾ ಕಂಗಾಲಾಗಿದ್ದಾರೆ. ಯಾಕೆಂದರೆ ಬಾಲ್ಯದಲ್ಲಿ ತಂದೆತಾಯಿಯರ ನೆರಳಿನಲ್ಲೇ ಸುಖವಾಗಿದ್ದ ಮಕ್ಕಳು ಹದಿವಯಸ್ಸಿಗೆ ಬಂದನಂತರ ಹೊರಗೆ ತಮ್ಮ ಸ್ನೇಹಿತರ ತಂಡವನ್ನು ಕಟ್ಟಿಕೊಂಡು ತಮ್ಮದೇ ಹೊಶ ಪ್ರಪಂಚವನ್ನು ನಿರ್ಮಿಸಿಕೊಂಡಿರುತ್ತಾರೆ. ಅಲ್ಲಿ ಆತ, ನಗೆಚಾಟಿಕೆ, ಒಟ್ಟಾಗಿ ಸುತ್ತಾಡುತ್ತಾ ಸುಖಿಸುವುದು, ಹೊಟೆಲ್ ಮುಂತಾದ ಕಡೆ ಒಟ್ಟಿಗೇ ತಿಂದು ಕುಡಿದು ಸಂತೋಷ ಪಡುವುದು, ಈ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಮರೆಯುವಷ್ಟು ಮಗ್ನರಾಗಿರುತ್ತಾರೆ. ಇಂಥಾ ಸಮಯದಲ್ಲಿ ಶಾಲೆಗಳು ಮುಚ್ಚಿವೆ. ಸ್ನೇಹಿತರು ಚದುರಿದ್ದಾರೆ. ಅವರ ಬಣ್ಣಬಣ್ಣದ ಜಗತ್ತಿನ ಕನಸು ದೂರವೇ ಹೊರೆಟುಹೋಗಿದೆ. ಇಂಥಾ ಸಮಯದಲ್ಲಿ ಫ್ರೆಸ್ಟೇಷನ್‍ಗೆ ಒಳಗಾಗುವುದು ಸಹಜವೇ ಅಲ್ಲವೇ? ಅವರ ಈ ದುಗುಡವನ್ನು ಅರ್ಥಮಾಡಿಕೊಳ್ಳಿ. ಮನೆಯಲ್ಲೇ ಒಳಕ್ರೀಡಾಂಗಣ ರೂಪಿಸಿ. ಸಾಧ್ಯವಿದ್ದವರು ಕೇರಂ, ಚೆಸ್, ಇಸ್ಪೀಟು ಇಂಥವನ್ನು ಮನೆಮಂದಿಯೆಲ್ಲಾ ಕುಳಿತು ಆಡಬಹುದು. ದೊಡ್ಡವರು ಬೇಕೆಂದೇ ಸೋತು ಮಕ್ಕಳನ್ನು ಗೆಲ್ಲಿಸಿ. ಏಕೆಂದರೆ ಈಗ ಅವರು ತಮ್ಮ ಸುಂದರ ಪ್ರಪಂಚವನ್ನು ಮಿಸ್ ಮಾಡಿಕೊಂಡು ಸೋತಿದ್ದಾರೆ. ಈ ಸಣ್ಣಪುಟ್ಟ ಗೆಲುವು ಅವರ ಚೂರಾದ ಹೃದಯವನ್ನು ಬೆಸೆಯಬಹುದು. ನಿಮ್ಮ ಅನುಭವ ಮಿದುಳು ಮಕ್ಕಳಿಗಿಂತಾ ಪಕ್ವವಾದದ್ದು. ನಾನು ಕೆಲವು ತಂದೆತಾಯಿಯರು ಮಕ್ಕಳನ್ನು ಆಟದಲ್ಲಿ ಸೋಲಿಸಿ, ತಾವು ವಿಜೃಂಭಣೆಯಿಂದ ಅಟ್ಟಹಾಸ ಮಾಡುವುದನ್ನು ನೋಡಿದ್ದೇನೆ. ಇದು ಖಂಡಿತಾ ಮಕ್ಕಳಲ್ಲಿ ಹತಾಷೆಯನ್ನು ಮೂಡಿಸುತ್ತದೆ. ಮೇಲಿನ ಆಟಗಳೆ ಅಲ್ಲದೇ ನಮ್ಮದೇ ಸಂಪ್ರದಾಯಿಕ ಆಟಗಳಾದ ಚೌಕಾಭಾರ, ಪಗಡೆ ಇತ್ಯಾದಿಗಳನ್ನೂ ಆಡಬಹುದು. ಒಟ್ಟಿನಲ್ಲಿ ಇಡೀ ಕುಟುಂಬ ಸಂತೋಷದ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು.

ಖಿನ್ನತೆಯಲ್ಲಿರುವ ಮಕ್ಕಳೆ ಕೇಳಿ. ನೀವು ರಸ್ತೆಯಲ್ಲಿ ನಡೆಯುತ್ತಾ ಹೋಗುತ್ತಿರುವಾಗ ಕುಷ್ಠರೋಗಿಗಳನ್ನು ನೋಡಿರಬಹುದು. ಪಾಪ ಅವರನ್ನು ರೋಗ ಯಾವಪರಿಯಲ್ಲಿ ಬಾಧಿಸಿರುತ್ತದೆಯೆಂದರೆ ಬೆರಳುಗಳನ್ನೆಲ್ಲಾ ತಿಂದುಹಾಕಿರುತ್ತದೆ. ಆದರೂ ಅವರು ಸಾಯುವ ಮನಸ್ಸು ಮಾಡುವುದಿಲ್ಲ ಆ ರೋಗದೊಂದಿಗೇ ತಮ್ಮ ಆಯುಷ್ಯವನ್ನು ಕಳೆಯುತ್ತಾರೆ. ಟಿ.ವಿಯಲ್ಲಿ ಅಥವಾ ನೆಂಟರಿಷ್ಟರ ಮನೆಗಳಲ್ಲಿ ಕ್ಯಾನ್ಸರ್ ಪೇಷಂಟ್‍ಗಳನ್ನು ನೀವು ನೋದಿರಬಹುದು. ಕಿಮೋಥೆರಪಿಯಿಂದ ಅವರ ತಲೆಗೂದಲೆಲ್ಲಾ ಉದುರಿಹೋಗಿರುತ್ತದೆ. ಆದರೂ ಅವರು ಔಷಢಿ ಪಥ್ಯಗಳನ್ನು ಮಾಡಿಕೊಳುತ್ತಾ ಆ ರೋಗದೊಂದಿಗೇ ಹೋರಾಡುತ್ತಾ ಬದುಕಲು ಪ್ರಯತ್ನಿಸುತ್ತಾರೆ. ನೀವು ನಿಮ್ಮದೊಂದು ಸಣ್ಣ ಬೇಜಾರಿಗೆ ಸಾಯುವ ನಿರ್ದಾರವನ್ನು ಯಾಕೆ ಮಾಡಬೇಕು ನಿಮ್ಮನ್ನೇನೀವು ಒಮ್ಮೆ ಪ್ರಶ್ನಿಸಿಕೊಳ್ಳಿ. ನಾನೊಂದು ಸಣ್ಣ ಕಥೆ ಹೇಳುತ್ತೇನೆ. ಅದನ್ನು ನಿಮಗೂ ಅನ್ವಯಿಸಿಕೊಳ್ಳಿ.

ಒಬ್ಬ ೧೮ವರ್ಷದ ಹುಡುಗ ಒಬ್ಬ ಸನ್ಯಾಸಿಯ ಹತ್ತಿರ ಬಂದು ಹೇಳಿದ “ ನನ್ನ ತಂದೆ ತಾಯಿ ಸತ್ತುಹೋದರು. ನಮಗಿದ್ದ ತುಂಡು ಜಮೀನನ್ನು ಸಾಲಗಾರರು ಕಿತ್ತುಕೊಂಡರು . ನಾನೀಗ ಅನಾಥ. ಭಿಕ್ಷೆ ಬೇಡಿ ಬದುಕಬೇಕು ಅಥವಾ ಸಾಯಬೇಕು. ನೀವು ಹೇಳಿ ಸ್ವಾಮೀಜಿ ನಾನು ಯಾವುದನ್ನು ಆರಿಸಿಕೊಳ್ಳಲಿ ”? ಅದಕ್ಕೆ ಸ್ವಾಮೀಜಿ “ ಹೌದಾ? ಭಿಕ್ಷೆಯೇ ಆದರೆ ನಾನು ನಿನಗೆ ೫೦೦ ರೂ ಕೊಡುತ್ತೇನೆ. ಎರಡು ಕಾಲಿಲ್ಲದವನಿಗೆ ಮಂತ್ರದಿಂದ ನಿನ್ನ ಒಂದು ಕಾಲನ್ನು ಸೇರಿಸಿ, ಅವನು ಕುಂಟುತ್ತಲಾದರೂ ನಡೆಯುವ ಹಾಗೆ ಮಾಡುತ್ತೇನೆ. ಭಿಕ್ಷೆಗೆ ೫೦೦ ರೂ ಸಿಗುತ್ತದೆ. ಸಾಯುವುದೇ ಆದರೆ ಒಂದು ಕಾಲಿಲ್ಲದಿದ್ದರೂ ಸಾಯಬಹುದಲ್ಲ “?ಎಂದರು. “ ಅಯ್ಯೋ ಕೇವಲ ೫೦೦ಕ್ಕೆ ಒಂದು ಕಾಲನ್ನು ಕೊಟ್ಟು ನಾನು ಒಂದೇ ಕಾಲಲ್ಲಿ ಬದುಕುವುದೇ? ಅಕಸ್ಮಾತ್ ಸಾಯಲು ಪ್ರಯತ್ನಿಸಿ ಸಾಯದೇ ಉಳಿದರೆ ಒಂದೇ ಕಾಲಲ್ಲಿ ಹೇಗೆ ಬದುಕಲಿ? ಇಲ್ಲಪ್ಪ ಕೊಡುವುದಿಲ್ಲ “ ಎಂದ ಯುವಕ. ಸ್ವಾಮೀಜಿ ಹೀಗೇ ಎರಡು ಕಾಲಿಗೆ ೧೦೦೦ ರೂಪಾಯಿ, ಎರಡು ಕೈಗಳನ್ನು ಕೊಟ್ಟರೆ ೫೦೦೦ರೂಪಾಯಿ, ಹೀಗೇ ಏರಿಸುತ್ತಾ ಹೋಗಿ ಕೊನೆಗೆ “ ಎರಡು ಕಣ್ಣುಗಳನ್ನು ಕೊಟ್ಟುಬಿಡು ಎರಡು ಲಕ್ಷರೂ ಕೊಡುತ್ತೇನೆ. ನೀನು ಸತ್ತರೆ ಯಾರಿಗಾದರೂ ಆ ಹಣವನ್ನು ದಾನ ಮಾಡೋಣ, ಬದುಕಿದರೆ ಶ್ರೀಮಂತನೇ ಆಗಿ ಬದುಕಬಹುದು “ ಎಂದರು.

“ ಒಂದು ವೇಳೆ ಸಾಯದೇ ಉಳಿದುಬಿಟ್ಟು, ಕಣ್ಣಿಲ್ಲದ ಕುರುಡನಾಗಿ ಯಾವ ಬಗೆಯ ಶ್ರೀಮಂತಿಕೆಯನ್ನು ಅನುಭವಿಸಲಿ? ನಾನು ಕೊಡುವುದಿಲ್ಲ “ ಎಂದ ಯುವಕ. “ ಹೋಗಲಿ ನಿನ್ನಮಿದುಳನ್ನು ಕೊಡಯ್ಯಾ ಒಂದು ಕೋಟಿರೂ ಕೊಡುತ್ತೇನೆ. ಹೇಗೂ ಮಿದುಳು ತೆಗೆದರೆ ನೀನು ಸಾಯುತ್ತೀ. ನೀನಾಗೆ ಸಾಯುವ ಕಷ್ಟವನ್ನೂ ತಪ್ಪಿಸುತ್ತೇನೆ “ ಎಂದರು ಸ್ವಾಮೀಜಿ. ಆ ಹೊತ್ತಿಗೆ ಹುಡುಗನಿಗೆ ಜ್ಞಾನೋದಯವಾಗಿತ್ತು. ಸ್ವಾಮೀಜಿಯ ಕಾಲು ಹಿಡಿದು ಕ್ಷಮಾಪಣೆ ಕೇಳಿ “ ಗುರುಗಳೆ ನೀವು ನನ್ನ ಕಣ್ಣು ತೆರೆಸಿದಿರಿ. ಭಗವಂತ ನನಗೆ ಕೋಟಿ ರೂಪಾಯಿ ಬೆಲೆಬಾಳುವ ಅಂಗಾಂಗಗಳನ್ನು ಕೊಟ್ಟಿದ್ದಾನೆ. ಅದನ್ನು ಬಳಸಿ ನಾನು ದುಡಿದು ಬದುಕುತ್ತೇನೆ “ ಎಂದು ತನ್ನೂರಿಗೆ ಹೋದ.
ಮಕ್ಕಳೆ ನಿಮಗೂ ಅಷ್ಟೆ ಭಗವಂತ ಕೋಟ್ಯಾಂತರ ಬೆಲೆ ಬಾಳುವ ಅಂಗಾಂಗಗಳನ್ನು ಕೊಟ್ಟಿದ್ದಾನೆ. ಆತ್ಮಹತ್ಯೆ ಮಾಡಿಕೊಂಡು ಭಗವಂತನಿಗೆ ಅವಮಾನ ಮಾಡಬಾರದು. ಪುರಂದರದಾಸರು ಹೇಳಿರುವಂತೆ “ ಈಸಬೇಕು ಇದ್ದು ಜೈಸಬೇಕು “

ನಿಮ್ಮಲ್ಲೂ ಇಂಥ ಸಮಸ್ಯೆಗಳು ಇವೆಯೆ? ಮಾನಸಿಕವಾಗಿ ತೊಂದರೆಗೆ ಒಳಗಾಗಿರುವಿರಾ? ಹಾಗಿದ್ದರೆ ನಿಮ್ಮ ಪ್ರಶ್ನೆಗೆ ಡಾ.ಶಾಂತಾ ನಾಗರಾಜ್‌ ಅವರು ಉತ್ತರಿಸುತ್ತಾರೆ. ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ಇ-ಮೇಲ್‌ ಐಡಿ: shanthanag@gmail.com / lalitha.vijayavani@gmail.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net