ಆಪ್ತ ಸಮಾಲೋಚನೆ: ಹದಿಹರೆಯದ ಮಕ್ಕಳು ಮಾತು ಕೇಳುತ್ತಿಲ್ಲ, ಪರಿಹಾರವೇನು?

nandonduweb
Published on

ನಮ್ಮ ಹದಿಹರೆಯದ ಮಗ ಮಗಳು ನಾವು ಹೇಳಿದ ಮಾತುಗಳನ್ನು ಕೇಳುವುದಿಲ್ಲ, ಎದುರುವಾದಿಸುತ್ತಾರೆ, ತಮಗೆ ಮನಬಂದಂತೆ ಮಾಡುತ್ತಾರೆ, ಇವರನ್ನು ಸರಿದಾರಿಯಲ್ಲಿ ಹೇಗೆ ಸಾಕುವುದು ಎಂದೇ ತಿಳಿಯುವುದಿಲ್ಲ ನಾವೇನು ಮಾಡಬಹುದು ತಿಳಿಸಿ ಇಂಥಾ ಪ್ರಶ್ನೆಗಳನ್ನು ಕೇಳಿ ಅನೇಕ ಪಾಲಕರು ನನಗೆ ಕಾಗದವನ್ನು ಬರೆದಿದ್ದಾರೆ. ಅವರೆಲ್ಲರಿಗೂ ಸಾಮೂಹಿಕವಾಗಿ ಹದಿವಯಸ್ಸಿನವರನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ ಈ ಕೆಳಗಿನ ಲೇಖನದಲ್ಲಿ ತಿಳಿಸಿದ್ದೇನೆ.

ಹದಿಹರೆಯದ ಮಕ್ಕಳ ಮನಸ್ಥಿತಿಯನ್ನು ನಾನು ಪೊರೆಕಳಚಿದ ಹಾವಿನ ಮನಸ್ಥಿತಿಗೆ ಹೋಲಿಸುತ್ತೇನೆ. ಹಾವು ಪೊರೆ ಕಳಚಿದಾಗ ಅದರ ಮೈಮೇಲೆ ನೀರಿನಂತಹ ಅಂಟು ಅಂಟಾದ ದ್ರವವಿರುತ್ತದೆ. ಅದು ಗಾಳಿಗೆ ಗಟ್ಟಿಯಾಗಿ ಹೊಸ ಪೊರೆಯಾಗುತ್ತದೆ. ಇದಕ್ಕೆ ನಾಲ್ಕಾರು ಗಂಟೆಗಳು ಬೇಕಾಗುತ್ತದೆ. ಆ ಸಮಯದಲ್ಲಿ ಹಾವಿನ ಮೈಗೆ ಒಂದು ಸಣ್ಣ ಮರಳಿನ ಕಣ ತಗುಲಿದರೂ ವಿಪರೀತ ನೋವಾಗುತ್ತದೆ. ಇದನ್ನು ತಪ್ಪಿಸಿ ತನ್ನನ್ನು ತಾನು ಕಾಪಾಡಿಕೊಳ್ಳಲು ಹಾವು ಒಂದು ದೊಡ್ಡ ಮರದ ಕೆಳಗೆ ಮೆತ್ತನೆಯ ಹುಲ್ಲಿನಲ್ಲಿ ಆಶ್ರಯ ಪಡೆಯುತ್ತದೆ. ಮಕ್ಕಳ ಹದಿಹರೆಯದ ಪ್ರಾರಂಭವೂ ಈ ಹಾವಿನ ಸ್ಥಿತಿಯಂತೆಯೇ. ಬಾಲ್ಯದ ಪೊರೆ ಕಳಚಿದೆ, ಯೌವನದ ಪೊರೆ ಇನ್ನೂ ಗಟ್ಟಿಯಾಗಿಲ್ಲ. ದೇಹದ ಹೊರ ಮತ್ತು ಒಳಭಾಗಗಳು ವೇಗವಾಗಿ ಬೆಳೆಯುತ್ತಿವೆ. ಮನಸ್ಸು ಇನ್ನೂ ಚಾಕಲೇಟ್ನಂಥಾ ಸವಿಯಾದ ಬಾಲ್ಯವನ್ನು ಬಿಟ್ಟು ಮುನ್ನುಗ್ಗಲು ಡೋಲಾಯಮಾನವಾಗಿದೆ. ಒಟ್ಟಿನಲ್ಲಿ ಎಲ್ಲವೂ ಅವರಿಗೆ ಗೊಂದಲವೋ ಗೊಂದಲ!

ಅವರ ದೈಹಿಕವಾದ ಗೊಂದಲ ಹೀಗಿದೆ. ಅವರಿಗೆ ತಾವು ಎತ್ತರವಾಗಿರುವುದು ಕನ್ನಡಿ ನೋಡಿಕೊಂಡಾಗ ಗೊತ್ತಾಗುತ್ತದೆ, ಆದರೆ ಕುಳ್ಳಗಿರುವ ಬಾಗಿಲನ್ನು ಹಾದು ಹೋಗುವಾಗ ತಲೆ ಬಗ್ಗಿಸುವುದು ತಿಳಿಯದೇ ಚೌಕಟ್ಟಿಗೆ ಹಣೆಯನ್ನು ಬಡಿಸಿಕೊಳ್ಳುತ್ತಾರೆ. ಅಂದರೆ ದೇಹ ಉದ್ದವಾಗಿರುವುದನ್ನು ಮಿದುಳು ಇನ್ನೂ ರಿಜಿಸ್ಟರ್ ಮಾಡಿಕೊಂಡಿಲ್ಲ. ಅವರ ಸಾಮಾಜಿಕ ಗೊಂದಲದಲ್ಲಿ ಅನೇಕ ಬಾರಿ ಕಕ್ಕಾಬಿಕ್ಕಿಯಾಗುತ್ತಾರೆ. ಉದ್ದ ಮತ್ತು ಸ್ವಲ್ಪ ದಪ್ಪವೂ ಆಗಿರುವ ಇವರನ್ನು ಸಮಾರಂಭಗಳಲ್ಲಿ ಯಾರಾದರೂ “ ಬನ್ನಿ ಸಾರ್ ಕುಳಿತುಕೊಳ್ಳಿ “ ಎಂದರೆ ಇವರು ಯಾರಿಗೆ ಹೇಳುತ್ತಿದ್ದಾರೆ ಎಂದು ಸುತ್ತಲೂ ತಿರುಗಿ ನೋಡುತ್ತಾರೆ. ಅಂದರೆ ಇವರ ಮೈಕಟ್ಟನ್ನು ಸಮಾಜ ಗಮನಿಸಿ ಗೌರವಿಸುತ್ತಿದೆ. ಆದರೆ ಇವರ ಮನಸ್ಸು ಅದಕ್ಕಿನ್ನೂ ತಯಾರಾಗಿಲ್ಲ.

ಬೌದ್ಧಿಕವಾಗಿಯೂ ಅನೇಕ ಪ್ರಸಂಗಗಳಲ್ಲಿ ಗೊಂದಲಗೊಳ್ಳುತ್ತಾರೆ. ಇವರ ಬುದ್ಧಿ ಈಗ ತರ್ಕದ ಕಡೆ, ವಿಜ್ಞಾನದ ಸತ್ಯದ ಕಡೆ ತಿಳುವಳಿಕೆಯನ್ನು ಪಡೆಯುತ್ತಿದೆ. ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಏಳುತ್ತಿವೆ. ಯಾರನ್ನು ಕೇಳುವುದು? ಗೊಂದಲ ಮತ್ತು ಹೆದರಿಕೆಗಳು ಕಾಡುತ್ತವೆ.

“ ಬೇಗ ಎದ್ದು ಸ್ನಾನ ಮಾಡಿ ತಿಂಡಿ ತಿನ್ನು “ ಅಮ್ಮ ಅಪ್ಪಣೆ ಕೊಡುತ್ತಾರೆ. ’ ಯಾಕೆ ಮೊದಲೇ ತಿಂಡಿ ತಿಂದು ಆಮೇಲೆ ಸ್ನಾನ ಮಾಡಿದರೇನು ’? ಈ ಪ್ರಶ್ನೆ ಅಮ್ಮನನ್ನು ಕೇಳಲು ಭಯ. “ ಹೊಸ ಸೈಕಲ್ಲನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬಾ” ಅಪ್ಪನ ಆಜ್ಞೆ. ’ ಯಾಕೆ ಮನೆಯಲ್ಲೇ ಪೂಜೆ ಮಾಡಿದರೇನಾಗುತ್ತದೆ? ದೇವಸ್ಥಾನಕ್ಕೇ ಯಾಕೆ ಹೋಗಬೇಕು’? ಪ್ರಶ್ನೆ. ಆದರದು ಗಂಟಲಲ್ಲೇ ಉಳಿದುಬಿಡುತ್ತದೆ. ಮಾನಸಿಕ ಗೊಂದಲಗಳಂತೂ ಅಸಂಖ್ಯಾತ. ಒಂದನೇ ಕ್ಲಾಸಿನಿಂದಲೂ ಒಟ್ಟಿಗೆ ಓದುತ್ತಿರುವ ತನ್ನ ಕ್ಲಾಸಿನ ಸಹಪಾಠಿಯೊಬ್ಬಳು ಈಗ ಅತ್ಯಂತ ಸುಂದರಿಯಾಗಿ ಕಾಣುತ್ತಿದ್ದಾಳೆ. ಅದನ್ನು ಅವಳಿಗೆ ಹೇಳಲೋ ಬೇಡವೋ? ಗೊಂದಲ. ಹುಡುಗಿಗೂ ಅಷ್ಟೆ ತನ್ನ ಸಹಪಾಠಿಯೊಬ್ಬ ಸಿನಿಮಾ ಹೀರೋ ಥರ ಕಾಣಿಸುತ್ತಾನೆ, ಅಗಾಗೆ ನೋಡಬೇಕೆನಿಸುತ್ತದೆ, ನೋಡಲೋ ಬೇಡವೋ? ಮನಸ್ಸು ತೂಗುಯ್ಯಾಲೆ!

“ ಅಪ್ಪಾ ನನ್ನ ಫ್ರೆಂಡ್ ತನ್ನಪ್ಪನ ಸ್ಕೂಟರನ್ನು ರೌಂಡಿಗೆ ತಗೊಂಡು ಹೋಗಿದ್ನಂತೆ, ಪೋಲೀಸ್ ಎದುರಿಗೇ ಬಂದನಂತೆ ಇವನು ಇನ್ನೂ ಮೈನರ್ ಅಂತ ಪೋಲೀಸ್ಗೆ ಗೊತ್ತೇ ಆಗಲಿಲ್ಲವಂತೆ “ ೧೫ವರ್ಷದ ಮಗ ಅಪ್ಪನ ಎದುರಿಗೆ ಹೆಮ್ಮೆಯಿಂದ ಹೇಳುತ್ತಾನೆ. ಅಪ್ಪ “ ಛೇ ಛೇ ಹಾಗೆಲ್ಲಾ ಲೈಸನ್ಸ್ ಇಲ್ದೇ ಹೋಗಬಾರದು ಕಣಯ್ಯಾ ಅದು ಇಲ್ಲೀಗಲ್ . ನ್ಯಾಯ ನೀತಿ ಸಣ್ಣವಯಸ್ಸಿಂದಾನೇ ಕಲೀಬೇಕು “ ಅಂದು ಗದರುತ್ತಾರೆ.. ಆಕ್ಷಣಕ್ಕೆ ಅಪ್ಪನ ನೈತಿಕ ಪಾಠ ಇಷ್ಟವಾಗುವುದಿಲ್ಲ . ಆ ಗೆಳೆಯನ ಹೀರೋ ತನವೇ ಪುಳಕ ತಂದು ಕೊಡುತ್ತದೆ. ತನ್ನನ್ನು ಆ ಗೆಳೆಯನ ಜಾಗದಲ್ಲಿ ಕಲ್ಪಿಸಿಕೊಳ್ಳುವ ಹಾಗಾಗುತ್ತದೆ.

ಹೀಗೆ ದೇಹದ ಒಳ ಅಂಗಗಳು ಅರಳುತ್ತಾ ಅರಳುತ್ತಾ ಈ ಎಲ್ಲಾ ಮೇಲಿನ ಕ್ಷೇತ್ರಗಳಲ್ಲಿ ವಿಕಾಸವಾಗುತ್ತಲೇ ಅನುಭವಗಳನ್ನು ಕೊಡುತ್ತವೆಯಾದರೂ ಖಚಿತವಾದ ನಿಲುವುಗಳನ್ನು ಇನ್ನೂ ಪಡೆದಿರುವುದಿಲ್ಲ. ಅದಕ್ಕಿನ್ನೂ ಸ್ವಲ್ಪ ಸಮಯ ಬೇಕು. ಹಾವಿನ ಪೊರೆ ಗಟ್ಟಿಯಾಗಕ್ಕೆ ಸಮಯ ಬೇಕಲ್ಲ? ಹಾಗೆ! ದುರಂತವೆಂದರೆ ಪಾಲಕರಾದ ನಾವು ಮಕ್ಕಳ ಈ ಸೂಕ್ಷ್ಮಗಳನ್ನು ಗಮನಿಸುವುದೇ ಇಲ್ಲ. ’ ಮಗ ಎತ್ತರ ಆಗ್ತಾ ಇದಾನೆ ಬೇರೆ ಬಟ್ಟೆ ಕೊಡಿಸ್ಬೇಕು, ಮಗಳು ಯಾಕೋ ಸ್ವಲ್ಪ ದಪ್ಪ ಕಾಣ್ತಾಳೆ ಬೇರೆ ಯೂನಿಫಾರಂ ತರಬೇಕೇನೋ ’ ಇಂಥಾ ಚಿಂತೆ ಮಾಡುತ್ತೇವೆಯೇ ವಿನಃ ಅವರ ಒಳಗಡೆ ಬಾಲ್ಯಕ್ಕೂ ಹದಿಹರೆಯಕ್ಕು ನಡೆಯುತ್ತಿರುವ ಜಟಾಪಟಿಯನ್ನು ಸೂಕ್ಷ್ಮವಾಗಿ ಅವಗಣಿಸಬೇಕಾದ ಅಗತ್ಯವಿದೆ. ಆದರೆ ನಾವು ಅದನ್ನು ಮರೆಯುತ್ತೇವೆ.

ನಾನೊಂದು ಶಾಲೆಯಲ್ಲಿ 10ನೇ ತರಗತಿಯ ಮಕ್ಕಳಿಗೆ ಲೈಫ್ ಸ್ಕಿಲ್ ಶಿಬಿರ ನಡೆಸಿಕೊಡಲು ಹೋಗಿದ್ದೆ. ಪ್ರಿನ್ಸಿಪಾಲ್ ಸಹ ಅಲ್ಲೇ ಇದ್ದರು. ಅಲ್ಲಿದ್ದ ಗಂಡು ಮತ್ತು ಹೆಣ್ಣು ಮಕ್ಕಳನ್ನು “ ನೀವೆಲ್ಲಾ ಒಟ್ಟಿಗೇ ಇಷ್ಟು ವರ್ಷದಿಂದ ಓದ್ತಾ ಇದೀರಲ್ಲ? ನಿಮ್ಮ ನಿಮ್ಮಲ್ಲೇ ಪರಸ್ಪರರಿಗೆ ’ ಇವನು ಚೆನ್ನಾಗಿದಾನೆ, ಇವಳು ಚೆನ್ನಾಗಿದಾಳೆ ’ ಅಂತ ಎಷ್ಟು ಜನಕ್ಕೆ ಅನ್ನಿಸಿದೆ ಕೈಯೆತ್ತಿ “ ಅಂದೆ. ಎಲ್ಲಾ ಮಕ್ಕಳೂ ಬಲವಾಗಿ ಕೈಕಟ್ಟಿದರೇ ವಿನಃ ಒಬ್ಬರೂ ಕೈಯೆತ್ತಲಿಲ್ಲ. ಆಗ ನಾನು ಪ್ರಿನ್ಸಿಪಾಲರಿಗೆ ಹೇಳಿದೆ “ ಮೇಡಂ ನಿಮ್ಮ ಶಾಲೆಯ ಮಕ್ಕಳಲ್ಲಿ ಏನೋ ದೋಷ ಇದೆ. ಈ ಎಲ್ಲಾ ಮಕ್ಕಳನ್ನೂ ನಿಮ್ಹಾನ್ಸ್ಗೆ ಒಂದು ಸಲ ಕರಕೊಂಡು ಹೋಗೋಣವಾ “? ಅಂತ. ತಕ್ಷಣ ಎಲ್ಲಾ ಕೈಗಳೂ ಮೇಲಕ್ಕೆದ್ದವು! ಆಗ ನಾನು ಹೇಳಿದೆ “ ಹಾಂ ಈಗ ನೀವೆಲ್ಲಾ ಮಾನಸಿಕವಾಗಿ ಆರೋಗ್ಯವಾಗಿದೀರಿ. ಈಗ ಇನ್ನೊಂದು ಪ್ರಶ್ನೆ ಈ ವಿಷಯನ ನಿಮ್ಮಪ್ಪ ಅಮ್ಮಂಗೆ ಎಷ್ಟು ಜನ ಹೇಳಿದೀರಿ “? ಎಲ್ಲಾ ಕೈಗಳು ಮತ್ತೆ ಬಿಗಿಯಾಗಿ ಕಟ್ಟಿಕೊಂಡವು. ಒಂದೇಒಂದು ಹುಡುಗ ನಿಧಾನವಾಗಿ ಕೈ ಮೇಲೆತ್ತಿದ. ಅವನ ಸತ್ಯಸಂಧತೆಗೆ ಚಪ್ಪಾಳೆ ತಟ್ಟಿಸಿದೆ. ಅವನನ್ನು ವೇದಿಕೆಗೆ ಕರೆದು ಮೈಕ್ ಕೊಟ್ಟು “ ನೀನು ಈ ವಿಷಯ ಹೇಳಿದ್ದಕ್ಕೆನಿಮ್ಮಪ್ಪ ಅಮ್ಮ ಏನಂದರು “? ಅಂತ ಕೇಳಿದೆ. ಅವನೆಂದ “ ಅಮ್ಮ ಚೆನ್ನಾಗಿ ಬೈದರು ಅಪ್ಪ ಮಾತ್ರ ಪುಟ್ಟ ಎಲ್ಲರಿಗೂ ಈ ವಯಸ್ಸಲ್ಲಿ ಹೀಗೇ ಅನ್ನಿಸತ್ತೆ. ಆದ್ರೆ ಅದನ್ನೇ ನೀನು ನಿಜಾಂತ ತಿಳೀಬೇಡ. ಆ ಹುಡುಗಿಯನ್ನು ಮಾತಾಡಿಸೋದಾಗ್ಲೀ, ಅಥವಾ ಆ ಹುಡುಗಿಯ ಬಗ್ಗೆ ನಿನ್ನ ಫ್ರೆಂಡ್ಸ್ ಹತ್ರ ಕಾಮೆಂಟ್ ಮಾಡೊದಾಗ್ಲೀ ಮಾಡಬೇಡ. ಈಗ ನಿನ್ನ ಕೆಲಸ ಓದೋದು. ಮುಂದೆ ಇದಕ್ಕೆಲ್ಲಾ ಬೇಕಾದಷ್ಟು ಸಮಯ ಸಿಗುತ್ತೆ ಅಂದ್ರು “ ನನಗೆ ನಿಜಕ್ಕೂ ಸಂತೋಷವಾಯಿತು. “ಇವರ ತಂದೆಗೂ ಒಮ್ಮೆ ಚಪ್ಪಾಳೆ ತಟ್ಟಿ” ಎಂದು ಹೇಳಿ ತಟ್ಟಿಸಿದೆ. ಮತ್ತು “ ನಿಮ್ಮ ತಂದೆಗೆ ಹೇಳು ಮಗೂ ನಿಮಗೆ ಇವತ್ತು ನನ್ನ ಗೆಳೆಯ ಗೆಳತಿಯರು ಚಪ್ಪಾಳೆ ತಟ್ಟಿದರು ಅಂತ “ ಎಂದೆ. ಇದು ನಿಜವಾಗಿಯೂ ಪಾಲಕರು ಅನುಸರಿಸಬೇಕಾದ ವಿಧಾನ!

ನಾನು ಪಾಲಕರಿಗಾಗಿ ಶಿಬಿರ ಮಾಡಲು ಹೋದಾಗ ಈ ಎಲ್ಲ ಅನುಭವಗಳನ್ನೂ ಹೇಳುತ್ತೇನೆ. ಆಗ ಅವರು ಕೇಳುವ ಪ್ರಶ್ನೆ “ ಅವರಿಗೆ ಹರೆಯ ಬಂತು ಅಂತ ತಲೆ ಮೇಲೆ ಇಟ್ಕೊಂಡು ಕುಣಿಸಬೇಕಾ”? ನಾವೂ ಎಲ್ಲಾ ಈ ವಯಸ್ಸನ್ನು ದಾಟಿಲ್ಲವಾ? ದೊಡ್ಡೋರು ಹೇಳಿದ ಹಾಗೆ ಕೇಳಿಕೊಂಡು ಇರಲಿಲ್ಲವಾ? ಇವರು ಯಾವ ಸೀಮೆ ದೊಡ್ಡ ಮನುಷ್ಯರು ಅಂತ ಇಷ್ಟೆಲ್ಲಾ ಹೇಳ್ತೀರಾ”? ಅನ್ನುತ್ತಾರೆ. ಆದರೆ ನಾವೆಲ್ಲಾ ಒಂದು ವಿಚಾರ ಮರೆಯುತ್ತೇವೆ. ನಮ್ಮ ಜಗತ್ತು ಚಿಕ್ಕದಾಗಿತ್ತು. ನಮಗೆ ನಮ್ಮ ಮನೆಯ ಹಿರಿಯರು ಬಿಟ್ಟರೆ ಯಾರೂ ಮತ್ತೇನೂ ಹೇಳುತ್ತಿರಲಿಲ್ಲ. ಆದರೆ ಈಗ ಟಿ.ವಿ ಇದೆ, ಮೊಬೈಲ್ ಫೋನಿದೆ, ಕಂಪ್ಯೂಟರ್ ಇದೆ, ಸಿನಿಮಾ ಜಾಹೀರಾತುಗಳು ಏನೆಲ್ಲಾ ಇವೆ. ಇವೆಲ್ಲಾ ಏನೇನೋ ಸಂದೇಶಗಳನ್ನು ಕೊಡುತ್ತಾ ಇರುತ್ತವೆ. ಅವು ಕೊಡುವ ಸಂದೇಶಕ್ಕೂ ನಾವು ಹೇಳುವ ಬುದ್ಧಿ ಮಾತಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ! ಉದಾಹರಣೆಗೆ – ಒಂದು ಸಿನಿಮಾ ಹಾಡು ಹೀಗೆ ಹೇಳತ್ತೆ “ ಕೂರಕ್ಕೆ ಕುಕ್ಕರಹಳ್ಳಿ ಕೆರೆ ಇದೆ, ನಿಲ್ಲಕ್ಕೆ ಇನ್ಯಾವುದೋ ಪಾರ್ಕ್ ಇದೆ, ಭಯ ಬಿಸಾಕು ಲವ್ ಮಾಡು “ ಅಂತ. ನಾವು ಮನೆಯಲ್ಲಿ ಹೇಳುತ್ತೇವೆ “ ನೀನೀಗ ದೊಡ್ಡಾಳಾಗಿದೀಯ, ದೊಡ್ಡೋನಾಗಿದೀಯ ಸ್ವಲ್ಪ ಗಂಭೀರವಾಗಿ ನಡ್ಕೋ, ನಮಗೆ ಕೆಟ್ಟಹೆಸರು ತರಬೇಡಾ “ ಎಂದು! ಮಕ್ಕಳು ಯಾವುದನ್ನು ಕೇಳಬೇಕು? ಅವರ ವಯಸ್ಸಿನ ತುಡಿತಕ್ಕೆ ಸಿನಿಮಾ ಹಾಡು ಹಿತವೆನಿಸುತ್ತದೆ. ನಮ್ಮ ಮಾತು ಗೊಂದಲವನ್ನು ತರುತ್ತದೆ. ಇಂಥಾ ಸಮಯದಲ್ಲಿ ಪೋಷಕರು ಮಾಡಬೇಕಾದ ಕೆಲಸ ಒಂದೇ ತಮ್ಮ ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ಪರಿಗಣಿಸುವುದು. ಮತ್ತು ಅವರ ಸಂಕಟಗಳನ್ನು ಆಪ್ತವಾಗಿ ಆಲಿಸುವುದು. ಜೊತೆಗೆ ಭರವಸೆಗಳನ್ನು ಕೊಡುತ್ತಾ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಅವರನ್ನು ಗೌರವದಿಂದ ಕಾಣುವುದು ಅವರ ವ್ಯಕ್ತಿತ್ವ ವಿಕಾಸವನ್ನು ಪೋಷಣೆ ಮಾಡುವುದು.

Sense of identity - ಈ ಹಂತವನ್ನು ಮನೋವಿಜ್ಞಾನಿಗಳು ಸೆನ್ಸ್ ಆಫ್ ಐಡೆಂಟಿಟಿ ಸ್ಟೇಜ್ ಎಂದು ಕರೆಯುತ್ತಾರೆ. ಮಕ್ಕಳು ಹದಿವಯಸ್ಸಿನವರೆಗೆ ಪಾಲಕರ ವೇದಿಕೆಯಲ್ಲಿ ಕೇವಲ ಮಕ್ಕಳಾಗಿ ತಮ್ಮ ಪಾತ್ರವನ್ನು ವಹಿಸುತ್ತಿದ್ದರು. ಹದಿವಯಸ್ಸಿಗೆ ಅವರದೇ ವೇದಿಕೆ ಪ್ರಕೃತಿಯಲ್ಲಿ ಸಿದ್ಧವಾಗುತ್ತದೆ. ಅವರು ಈಗ ಸ್ವತಂತ್ರವಾಗಿ ಹಲವು ಪಾತ್ರಗಳನ್ನು ಯಶಸ್ವಿಯಾಗಿಯೂ ನಿರ್ವಹಿಸಬೇಕಾಗಿದೆ ಎಂದು ಅವರಿಗೆ ಅರ್ಥವಾಗುತ್ತಿದೆ. ತಂದೆ ತಾಯಿಗೆ ಮಗನಾಗಿ, ಮಗಳಾಗಿ, ಅಕ್ಕನಿಗೆ ತಮ್ಮನಾಗಿ ತಂಗಿಗೆ ಅಣ್ಣನಾಗಿ, ಪರಸ್ಪರ ಸಹೋದರ ಸಹೋದರಿಯರಾಗಿ, ಸ್ನೇಹಿತರಿಗೆ ಸ್ನೇಹಿತರಾಗಿ, ಶಾಲೆಯಲ್ಲಿ ವಿದ್ಯಾರ್ಥಿ,ವಿದ್ಯಾರ್ಥಿನಿಯರಾಗಿ ಸಮರ್ಥವಾಗಿ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಜೊತೆಗೆ ತಮ್ಮದೇ ಬದುಕಿನ ಗುರಿಯ ಕಡೆಗೂ ಯೋಚಿಸಬೇಕಾಗುತ್ತದೆ. ಇಲ್ಲಿ ಅವರ ಒಳ ಮತ್ತು ಹೊರ ವ್ಯಕ್ತಿತ್ವಗಳಲ್ಲಿ ಸಂಘರ್ಷ ಶುರುವಾಗುತ್ತದೆ. ಏನು ಇದು ? ಒಳಗೊಂದು ಹೊರಗೊಂದು ವ್ಯಕ್ತಿತ್ವ ಇದೆಯೇ? ಎನ್ನುವ ಪ್ರಶ್ನೆಗೆ ಒಂದು ಉದಾಹರಣೆ ಕೊಡುತ್ತೇನೆ. ನೀವು ನಿಮಗೆ ಪರಮಾಪ್ತರೆನಿಸುವ, ನಿಮಗೆ ಕಷ್ಟದಲ್ಲಿ ಸಹಾಯ ಮಾಡಿರುವ ದೊಡ್ಡ ಮನುಷ್ಯರ ಕುಟುಂಬವನ್ನು ಊಟಕ್ಕೆ ಕರೆಯುತ್ತೀರಿ. ನೀವು ದಂಪತಿಗಳು ಬಹಳ ಅಕ್ಕರೆಯಿಂದ ಆರಿಸಿ ಆರಿಸಿ ಒಳ್ಳೆಯ ಉಡುಗೊರೆಗಳನ್ನೂ ತರುತ್ತೀರಿ. ಮನೆಯ ಗೃಹಿಣಿ ತನ್ನ ಅಚ್ಚುಮೆಚ್ಚಿನ, ಅನೇಕ ಬಾರಿ ಮಾಡಿ ರುಚಿಯಲ್ಲಿ ಕೈ ಪಳಗಿದ ಅಡುಗೆಗಳನ್ನೇ ಶುಚಿರುಚಿಯಾಗಿ ಮಾಡುತ್ತಾರೆ. ನಂತರ ಚೆನ್ನಾದ ಬಟ್ಟೆತೊಟ್ಟು ಅತಿಥಿಗಳನ್ನು ಸ್ವಾಗತಿಸುತ್ತೀರಿ. ಬಂದ ಅತಿಥಿಗಳು ಖುಷಿಯಾಗಿ ಊಟವನ್ನೂ ಮಾಡಿ ನೀವು ಕೊಟ್ಟ ಉಡುಗೊರೆಗಳನ್ನೂ ಸ್ವೀಕರಿಸಿ ನಿಮ್ಮ ಮನೆಯನ್ನು, ಅದನ್ನು ನೀವು ಇಟ್ಟುಕೊಂಡಿರುವ ರೀತಿಯನ್ನೂ ಚೆನ್ನಾಗಿ ಹೊಗಳಿ ಹೊರಟು ಹೋಗುತ್ತಾರೆ. ಆದರೆ ನೀವು ಮಾಡಿದ ಅಡುಗೆಯ ರುಚಿಯ ಬಗ್ಗೆಯಾಗಲೀ, ನೀವು ಕೊಟ್ಟ ಉಡುಗೊರೆಯ ಬಗ್ಗೆಯಾಗಲೀ ಒಂದೇ ಒಂದು ಮಾತನ್ನೂ ಆಡುವುದಿಲ್ಲ. ನೀವು ತುಂಬಾ ಸಂಕೋಚದಿಂದ “ ನಿಮಗೆ ಇಷ್ಟಾ ಅಂತ ಈ ಬಣ್ಣದ ಶರಟು ತಂದಿದೀನಿ ನೋಡಿ, ಇಷ್ಟ ಆಗಲಿಲ್ಲಾಂದ್ರೆ ಬೇರೆ ತರ್ತೀನಿ “ ಅಂತೆಲ್ಲಾ ಕೇಳಿಕೊಳ್ಳುತ್ತೀರಿ. ಆದರೆ ಅವರು ಅದರ ಪ್ಯಾಕೆಟ್ ಸಹ ಬಿಚ್ಚದೇ “ ಇರಲಿ ಇರಲಿ “ ಅಂತ ಹೊರಟೇ ಹೋಗುತ್ತಾರೆ. ನಿಮಗೆ ತೀರಾ ನಿರಾಸೆಯಾಗುತ್ತದೆ. ಯಾಕೆ? ಯಾಕೆಂದರೆ ನೀವು ದಂಪತಿಗಳು ಅವರ ಬರವಿಗಾಗಿ ಪಟ್ಟ ಸಂಭ್ರಮ, ಆದರದಿಂದ ತಂದ ಉಡುಗೊರೆ, ಅಕ್ಕರೆಯಿಂದ ಮಾಡಿದ ಅಡುಗೆ ಇವೆಲ್ಲಾ ನಿಮ್ಮ ಒಳಕಾಳಜಿಗಳಾಗಿದ್ದವು. ಎಂದೋ ಕಟ್ಟಿದ ಮನೆ, ಅದನ್ನು ಇಟ್ಟುಕೊಂಡಿರುವ ರೀತಿ ನಿಮ್ಮ ವ್ಯಕ್ತಿತ್ವದ ಒಂದು ಭಾಗವಷ್ಟೇ. ಆದರೆ ಅದೇ ನಿಮ್ಮ ಪೂರ್ಣ ವ್ಯಕ್ತಿತ್ವವಲ್ಲ. ನಿಮ್ಮ ನಿಜವಾದ ಒಳ ವ್ಯಕ್ತಿತ್ವ ನಿಮ್ಮ ಆದರ ಮತ್ತು ಕಾಳಜಿಗಳಾಗಿದ್ದವು ಅದನ್ನು ಅವರು ಗೌರವಿಸಲಿಲ್ಲ. ಆದ್ದರಿಂದ ನಿಮ್ಮ ಒಳವ್ಯಕ್ತಿತ್ವ್ಫ ನಿರಾಸೆಯನ್ನು ಅನುಭವಿಸಿತು.

ನೀವೀಗ ಮಾಡಬೇಕಾಗಿರುವುದು ನಿಮ್ಮ ಮಕ್ಕಳ ಈ ಒಳ ವ್ಯಕ್ತಿತ್ವವನ್ನು ಗುರುತಿಸುವುದು ಮತ್ತು ಅದನ್ನು ಪೋಷಿಸುವುದು. ಯಾಕೆಂದರೆ ಅವರಿಗೆ ಸೆನ್ಸ್ ಆಫ್ ಐಡೆಂಟಿಟಿಯ ಬಗ್ಗೆಯೇ ಖಚಿತ ಅಭಿಪ್ರಾಯಗಳಿರುವುದಿಲ್ಲ. ನಾನು ಯಾರು? ನಾನು ಏನು? ನನಗೇನು ಬೇಕು? ಇವುಗಳ ಬಗ್ಗೆಯೇ ಗೊಂದಲಗಳಿರುತ್ತವೆ. ಅವೆಲ್ಲವನ್ನೂ ನಿವಾರಿಸಿಕೊಳ್ಳಲು ಅವರಿಗೆ ಗಟ್ಟಿಯಾದ ಆತ್ಮವಿಶ್ವಾಸ ಬೇಕಾಗಿರುತ್ತದೆ. ಆ ಆತ್ಮವಿಶ್ವಾಸವೇ ಅವರ ಒಳ ವ್ಯಕ್ತಿತ್ವವಾಗಬೇಕು. ಅದನ್ನು ನೀವು ಅಭಿವೃದ್ಧಿ ಪಡಿಸಬಹುದು. ಹೇಗೆ ಅನ್ನುವ ಪ್ರಶ್ನೆ ಹುಟ್ಟತ್ತದೆ ಅಲ್ಲವೇ? ತುಂಬಾ ಸುಲಭ. ಈ ವಯಸ್ಸಿನ ಮಕ್ಕಳು ಮಾಡೋ ಕೆಲಸಗಳನ್ನು ಮೆಚ್ಚಿಕೊಳ್ಳುತ್ತಾ ದಿನಕ್ಕೆ ಒಂದೆರಡು ಸಲ ಕಡ್ಡಾಯವಾಗಿ ಅವರ ಬಗ್ಗೆ ಒಳ್ಳೇ ಮಾತನ್ನು ಹೇಳುವುದು. ಅವರ ಕೆಲಸವನ್ನು ನೀವು ಮೆಚ್ಚಿದಾಗ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇಂಥಾ ಮಾತುಗಳನ್ನು ಮತ್ತೆ ಮತ್ತೆ ಕೇಳಲು ಒಳ್ಳೆ ಕೆಲಸಗಳನ್ನೇ ಮಾಡುವ ಪ್ರಯತ್ನ ಮಾಡುತ್ತಾರೆ. ಇಂಥಾ ನಿರೀಕ್ಷೆಗಳು ಮಕ್ಕಳಲ್ಲಿ ಅಷ್ಟೇ ಅಲ್ಲ, ದೊಡ್ಡವರಾದ ನಮ್ಮಲ್ಲೂ ಇರುತ್ತದೆ. ನೀವು ಕಷ್ಟ ಪಟ್ಟು ಎರಡು ದಿನ ಮಾಡುವ ಕೆಲಸವನ್ನು ಒಂದೇ ದಿನದಲ್ಲಿ ಮುಗಿಸಿರುತ್ತೀರಿ. ನಿಮ್ಮ ಮೇಲಧಿಕಾರಿಗಳು “ ಓ ಏನ್ರೀ ಎರಡು ದಿನದ ಕೆಲ್ಸಾನ ಒಂದೇ ದಿನ ಮುಗಿಸಿಬಿಟ್ಟಿದ್ದೀರಾ? ಭೇಷ್ ಪರವಾಗಿಲ್ಲರೀ ನೀವು “ ಅಂದರೆ ನಿಮಗೆ ಕೆಲಸ ಮಾಡಿದ್ದಕ್ಕೂ ಸಾರ್ಥಕ ಅನ್ನಿಸುತ್ತದೆ. ಅದೇ ನಿಮ್ಮ ಮೇಲಧಿಕಾರಿ ನೀವು ಮಾಡಿದ ಕೆಲಸವನ್ನೇ ಗಮನಿಸದೇ “ ಆಯ್ತಾ ಸರಿ “ ಎಂದಷ್ಟೇ ಹೇಳಿದರೆ ನಿಮಗೆಷ್ಟು ನಿರಾಸೆಯಾಗುತ್ತದೆ? ಊಹಿಸಿ . “ ಈ ದರಿದ್ರ ಆಫೀಸಿನಲ್ಲಿ ಎಷ್ಟು ದುಡಿದರೂ ಇಷ್ಟೇ “ ಎಂದು ಮನಸ್ಸಿನಲ್ಲೇ ಕೊರಗುತ್ತೀರಿ.

ನಾವು ತಂದೆತಾಯಿಯರು ಮಾಡುವ ಮತ್ತೊಂದು ತಪ್ಪು ಎಂದರೆ ಮಕ್ಕಳು ತಪ್ಪು ಮಾಡಿದಾಗ ಧಾರಾಳವಾಗಿ ಬಯ್ಯುತ್ತೇವೆ. ಅದೇ ಅವರು ಮನೆಗೆ ಹಿತವಾಗುವ, ಅಪ್ಪ ಅಮ್ಮನಿಗೆ ಸಹಾಯವಾಗುವ ಕೆಲಸ ಮಾಡಿದಾಗ ನಿಮ್ಮ ಆ ಮೇಲಧಿಕಾರಿಯ ಹಾಗೇ “ ಓ ಮಾಡಿದೆಯಾ ಸರಿ “ ಅಂತ ಅಷ್ಟೇ ಹೇಳುತ್ತೇವೆ. ಒಂದು ಮಾತನ್ನು ನೆನಪಿಡಿ, ನೀವು ಮೆಚ್ಚಿ ಮಾತಾಡುವ ಒಂದೊಂದು ಮಾತೂ ನಿಮ್ಮ ಹದಿಹರೆಯದ ಮಕ್ಕಳ ಆತ್ಮವಿಶ್ವಾಸದ ಸೌಧವನ್ನು ಕಟ್ಟಲು ನೀವು ಇಡುವ ಒಂದೊಂದು ಅಡಿಪಾಯದ ಕಲ್ಲುಗಳು ಎಂದು ಭಾವಿಸಿ. ನೀವು ಎಷ್ಟು ಎಷ್ಟು ಮೆಚ್ಚುಗೆಯ ಮಾತುಗಳನ್ನಾಡುತ್ತೀರೋ ಅಷ್ಟು ಅಷ್ಟೂ ಅವರ ಆತ್ಮವಿಶ್ವಾಸದ ಅಡಿಪಾಯ ಗಟ್ಟಿಯಾಗುತ್ತಾ ಹೋಗುತ್ತದೆ. ಅದರ ಮೇಲೆ ನಿಲ್ಲುವ ಅವರ ವ್ಯಕ್ತಿತ್ವದ ಸೌಧ ಸುಂದರವಾಗಿಯೇ ಇರುತ್ತದೆ. ಅವರ ಮುಂದಿನ ಜೀವನದಲ್ಲಿ ಎಂಥಾ ಕಷ್ಟ ಬಂದರೂ ಸಾವಧಾನವಾಗಿ ನಿವಾರಿಸಿಕೊಳ್ಳುವ ಜಾಣತನ ಬರುತ್ತದೆ. ಈ ಹಂತದಲ್ಲಿ ಒಂದು ವಿಷಯವನ್ನು ಅಗತ್ಯವಾಗಿ ಮನಗಾಣಬೇಕು. ಹದಿವಯಸ್ಸಿನ ಮಕ್ಕಳನ್ನು ಹೊಗಳುವುದು ಎಂದರೆ ಅವರೇನು ಮಾಡಿದರೂ ಹೊಗಳುವುದು ಎಂದಲ್ಲ, ಸ್ವಾರ್ಥವಿಲ್ಲದೇ, ಕುಟುಂಬಕ್ಕೋ ಸಮಾಜಕ್ಕೋ ಮಾಡಿದ ಒಳ್ಳೆಯ ಕೆಲಸವನ್ನು ಮಾತ್ರ ಮೆಚ್ಚಬೇಕು. ಅವರನ್ನು ಉತ್ತಮ ವ್ಯಕ್ತಿ ಮತ್ತು ಉತ್ತಮ ಪ್ರಜೆ ಎರಡೂ ಆಗುವಂತೆ ಪ್ರೋತ್ಸಾಹಿಸಬೇಕು.

ಕವಿ ಕಾವ್ಯಾನಂದರ ಒಂದು ಕವನದ ನಾಲ್ಕು ಸಾಲುಗಳು ಹೀಗಿವೆ :

ಓದಿ ಬ್ರಾಹ್ಮಣನಾಗು, ಕಾದು ಕ್ಷತ್ರಿಯನಾಗು

ವೀರ ವೈಶ್ಯನೆ ಆಗು ದುಡಿದು ಗಳಿಸಿಏನಾದರೂ ಆಗು ನಿನ್ನೊಲವಿನಂತಾಗುಏನಾದರೂ ಸರಿಯೇ ಮೊದಲು ಮಾನವನಾಗು.ನಿಮ್ಮಲ್ಲೂ ಇಂಥ ಸಮಸ್ಯೆಗಳು ಇವೆಯೆ? ಮಾನಸಿಕವಾಗಿ ತೊಂದರೆಗೆ ಒಳಗಾಗಿರುವಿರಾ? ಹಾಗಿದ್ದರೆ ನಿಮ್ಮ ಪ್ರಶ್ನೆಗೆ ಡಾ.ಶಾಂತಾ ನಾಗರಾಜ್‌ ಅವರು ಉತ್ತರಿಸುತ್ತಾರೆ. ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ಇ-ಮೇಲ್‌ ಐಡಿ: shanthanag@gmail.com / lalitha.vijayavani@gmail.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net