

ಬೆಂಗಳೂರು: ಹೊಸ ವರ್ಷದ ಪ್ರಯುಕ್ತ ನಗರದಲ್ಲಿ ಜನರ ಓಡಾಟವೂ ಹೆಚ್ಚಿರುತ್ತದೆ. ಟ್ರಾಫಿಕ್ ಸಮಸ್ಯೆಯ ಒತ್ತಡವೂ ಇರುವುದರಿಂದ ಜನರು ಮೆಟ್ರೋ ಸಂಚಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಇದರಿಂದ ನಗರದ ಪ್ರಮುಖ ಪ್ರದೇಶಗಳಿಗೆ ಸಂಚಾರ ದಟ್ಟಣೆಯ ಕಿರಿಕಿರಿ ಇಲ್ಲದೆ ಬೇಗನೆ ತಲುಪಬಹುದು.
ಇದೀಗ ಹೊಸ ವರ್ಷದಂದು ನಮ್ಮ ಮೆಟ್ರೋ ಹೊಸ ದಾಖಲೆ ಬರೆದಿದೆ. 2023ರ ಮೊದಲ ದಿನವೇ 6,29,903 ಮಂದಿ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಇದರಿಂದ 1.5 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಹೊಸ ವರ್ಷದ ಪ್ರಯುಕ್ತ ಜನರ ಅನುಕೂಲಕ್ಕಾಗಿ ಬಿಎಂಆರ್ಸಿಎಲ್ ನಿಗಮ ಮುಂಜಾನೆ 2 ಗಂಟೆ ವರೆಗೂ ಮೆಟ್ರೋ ರೈಲು ಓಡಾಟದ ಸಮಯ ವಿಸ್ತರಿಸಿತ್ತು.ನಗರ ಪ್ರಮುಖ ಸ್ಥಳಗಳಾದ ಎಂ.ಜಿ.ರೋಡ್, ಕಬ್ಬನ್ ಪಾರ್ಕ್ ಮೆಟ್ರೋ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಹೊಸ ವರ್ಷದಂದು ಪ್ರಯಾಣಿಸಿದ್ದಾರೆ.
ಸದ್ಯ ನಮ್ಮ ಮೆಟ್ರೋ ಜನಸ್ನೇಹಿಯಾಗಿ ಗುರುತಿಸಿಕೊಳ್ಳುತ್ತಿದೆ. ಜನರು ಟಿಕೆಟ್ಗಾಗಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವುದಕ್ಕಾಗಿ ಕ್ಯೂ ಆರ್ ಕೋಡ್ ಟಿಕೆಟ್ನ್ನು ಬಿಎಂಆರ್ಸಿಎಲ್ ಪರಿಚಯಿಸಿದೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈಗಾಗಲೇ ಪ್ರತಿ ತಿಂಗಳು ಕ್ಯೂಆರ್ ಟಿಕೆಟ್ ಮೂಲಕ ಸರಾಸರಿ 1.5 ಲಕ್ಷಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದಾರೆ.