ಸೋನು ಸೂದ್​ ಊಟದ ಬಿಲ್ ಪಾವತಿಸಿದ ಅನಾಮಧೇಯ ವ್ಯಕ್ತಿ! ಆತ ಬರೆದ ಸಾಲು ನೋಡಿ ನಟ ಭಾವುಕ

Untitled design - 2024-02-23T212353.783
Published on

ಮುಂಬೈ: ಬಹುಭಾಷಾ​ ನಟ, ಜನಪ್ರಿಯ ವ್ಯಕ್ತಿ ಸೋನು ಸೂದ್​ಗೆ ದೇಶವ್ಯಾಪಿ ಬಹುದೊಡ್ಡ ಅಭಿಮಾನಿ ಬಳಗ ಇರುವುದು ನಮಗೆಲ್ಲಾ ತಿಳಿದೇ ಇದೆ. ಸಾಮಾಜಿಕ ಕೆಲಸಗಳಲ್ಲಿ ಹೆಚ್ಚು ಸಕ್ರಿಯರಾದ ಸೋನು, ದೇಶದಲ್ಲಿ ಬಡ ಜನರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹೀಗೆ ಅನೇಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ಇದೇ ವಿಷಯಕ್ಕೆ ಅನಾಮಧೇಯ ಅಭಿಮಾನಿಯೊಬ್ಬರು, ನಟ ತಿಂದ ಊಟಕ್ಕೆ ತಾವೇ ಹಣವನ್ನು ಕೊಡುವ ಮೂಲಕ ಬಿಲ್ ಪಾವತಿಸಿದ್ದಾರೆ.

ಹೆಸರಾಂತ ರೆಸ್ಟೋರೆಂಟ್‌ನಲ್ಲಿ ಭೋಜನ ಮಾಡುತ್ತಿದ್ದ ನಟ ಸೋನು ಸೂದ್ ಅವರ ಸಂಪೂರ್ಣ ಬಿಲ್‌ ಅನ್ನು ಅನಾಮಧೇಯ ಅಭಿಮಾನಿ ಪಾವತಿಸಿ, ತಮ್ಮ ಕೈಬರಹದಲ್ಲಿ ಚಿಕ್ಕದೊಂದು ಪತ್ರ ನೀಡಿ, ಸ್ಥಳದಿಂದ ಹೋಗಿದ್ದಾರೆ. ಈ ವಿಷಯ ತಿಳಿದ ನಟ, ಅಭಿಮಾನಿ ಬರೆದ ಸಾಲುಗಳನ್ನು ಓದಿ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಭಿಮಾನಿ ಬರೆದ ಪತ್ರ ಹಂಚಿಕೊಂಡ ಸೋನು ಸೂದ್​, "ಇದನ್ನು ಯಾರು ಮಾಡಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ಯಾರೋ ರೆಸ್ಟೋರೆಂಟ್‌ನಲ್ಲಿ ನಮ್ಮ ರಾತ್ರಿಯ ಭೋಜನದ ಸಂಪೂರ್ಣ ಬಿಲ್‌ ಪಾವತಿಸಿದ್ದಾರೆ ಮತ್ತು ಈ ಸ್ವೀಟ್​ ಲೆಟರ್​ ಕೊಟ್ಟಿದ್ದಾರೆ. ಇದು ನಿಜವಾಗಿಯೂ ನನ್ನ ಮನ ಸ್ಪರ್ಶಿಸಿದೆ, ಧನ್ಯವಾದಗಳು ಗೆಳೆಯ" ಎಂದು ಬರೆದಿದ್ದಾರೆ.

"ದೇಶಕ್ಕಾಗಿ ನೀವು ಮಾಡುವ ಎಲ್ಲಾ ಒಳ್ಳೆಯ ಕೆಲಸಗಳಿಗೆ ಧನ್ಯವಾದಗಳು" ಎಂದು ಅಭಿಮಾನಿ ಬರೆದಿರುವುದನ್ನು ನಟ ಹಂಚಿಕೊಂಡ ಫೋಟೋದಲ್ಲಿ ಕಾಣಬಹುದು. ಸದ್ಯ ನಟನಿಗೆ ಫ್ಯಾನ್​ ಕೊಟ್ಟ ಈ ಗಿಫ್ಟ್​ ಅನೇಕರಿಗೆ ಸಂತಸ ನೀಡಿದ್ದು, ಈ ಪೋಸ್ಟ್​ಗೆ ಹೆಚ್ಚಿನ ಲೈಕ್​ ಕೊಡುವ ಮುಖೇನ ಮೆಚ್ಚುಗೆ ಸೂಚಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net