

ಮಂಗಳೂರು: ರಸ್ತೆ ಗುಂಡಿ, ಮೋರಿ, ಚರಂಡಿ ಮುಂತಾದ ಸಣ್ಣ ವಿಚಾರಗಳ ಬಗ್ಗೆ ಮಾತನಾಡಬೇಡಿ. ಲವ್ ಜಿಹಾದ್ ವಿಷಯದ ಮೇಲೆ ಕೇಂದ್ರೀಕರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಭೂತ್ ವಿಜಯ ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ನಳಿನ್ ಕುಮಾರ್ ಕಟೀಲ್ ಆಡಿರುವ ಮಾತುಗಳು ಇದೀಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.
ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ, ನಿಮ್ಮ ಗಮನ ರಸ್ತೆ ಗುಂಡಿಗಳತ್ತ ಬೇಡ. ಬದಲಾಗಿ ಲವ್ ಜಿಹಾದ್ನತ್ತ ಇರಲಿ. ನಿಮ್ಮ ಮಕ್ಕಳನ್ನು ಲವ್ ಜಿಹಾದ್ನಿಂದ ರಕ್ಷಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ ಭಯೋತ್ಪಾದಕ ಪಕ್ಷ ಎಂಬುದು ಎಲ್ಲರಿಗೂ ಮನವರಿಕೆ ಆಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಲಿವೆ. ಹೀಗಾಗಿ ಕಾಂಗ್ರೆಸ್ಗೆ ಮತ ನೀಡುವ ಮೊದಲು ಜನರು ಯೋಚಿಸಬೇಕಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡುತ್ತಾ, ಬಿಜೆಪಿ ಕಾರ್ಯಕರ್ತ ಪ್ರವೀಟ್ ನೆಟ್ಟಾರ್ ಹತ್ಯೆಯ ನಂತರ ಪಿಎಫ್ಐ ಮತ್ತು ಕೆಎಫ್ಡಿಯನ್ನು ನಿಷೇಧಿಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಧಾರವನ್ನು ತೆಗೆದುಕೊಳ್ಳದೇ ಇದ್ದರೆ ಕೆಲವು ಬಿಜೆಪಿ ನಾಯಕರು ಕೊಲೆಯಾಗಿ ಹೋಗುತ್ತಿದ್ದರು ಎಂದು ಹೇಳಿದರು.
ಎಂದಿನಂತೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ನಳಿನ್ ಕುಮಾರ್ ಕಟೀಲ್, ಮುಂದಿನ ಚುನಾವಣೆಯ ಒಳಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ. ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಪಾಲಾಗುವುದು ಖಚಿತ ಎಂದರು.