ಮಕ್ಕಳು ಮಾಡಿಕೋ ಎಂದಿದ್ದಕ್ಕೆ ಸಿಟ್ಟು; ಒಂದೇ ಕುಟುಂಬದ ಮೂವರ ಹತ್ಯೆ

ludhiana murder
Published on

ಅಮೃತಸರ: ಮಕ್ಕಳನ್ನು ಮಾಡಿಕೊಳ್ಳಿ ಎಂದು ಹೇಳಿದ್ದಕ್ಕೆ ಬವ್ಯಕ್ತಿಯೋರ್ವ ಒಂದೇ ಕುಟುಂಬದ ಮೂವರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಪಂಜಾಬ್​ನ ಲುಧಿಯಾನ ನಗರದಲ್ಲಿರುವ ಸೇಲಂ ತಬ್ರಿ ಪ್ರದೇಶದಲ್ಲಿ ನಡೆದಿದೆ.

ಘಟನೆಯೂ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಚಮನ್​ ಲಾಲ್​(75), ಸುರಿಂದರ್​ ಕೌರ್​(70) ಹಾಗೂ 90 ವರ್ಷದ ವೃದ್ಧೆ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿ ರಾಬಿನ್​ ಅಲಿಯಾಸ್​ ಮುನ್ನಾ(46) ಎಂಬಾತನನ್ನು ಬಂಧಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಲುಧಿಯಾನ ಪೊಲೀಸ್​ ಕಮಿಷನರ್​ ಮಂದೀಪ್​ ಸಿಂಗ್​ ಸಿಧು, ವೃತ್ತಿಯಲ್ಲಿ ಇ-ರಿಕ್ಷಾ ಚಾಲಕನಾಗಿರುವ ರಾಬಿನ್​ ಮದುವೆಯಾಘಿಗಿ ತುಂಬಾ ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ನೆರೆಯ ಮನೆಯಲ್ಲಿ ವಾಸಿಸುತ್ತಿದ್ದ ಸುರಿಂದರ್​ ಕೌರ್​ ಹಾಗೂ ಕುಟುಂಬಸ್ಥರು ಈತನಿಗೆ ಮಕ್ಕಳನ್ನು ಮಾಡಿಕೊಳ್ಳುವಂತೆ ಅಥವಾ ಇದಕ್ಕಾಗಿ ಟ್ರೀಟ್​ಮೆಂಟ್​ ಪಡೆಯುವಂತೆ ಸಹ ಸಲಹೆ ನೀಡುತ್ತಿದ್ದರು.

ಸುರಿಂದರ್​ ಕೌರ್ ಹಾಗೂ ಆಕೆಯ ಕುಟುಂಬಸ್ಥರು ಈ ವಿಚಾರವನ್ನು ಪದೇ ಪದೇ ಎಲ್ಲರ ಮುಂದೆ ಪ್ರಸ್ತಾಪ ಮಾಡುವುದನ್ನು ಕಂಡು ಮುಜುಗರಕ್ಕೀಡಾಗಿದ್ದ ಆರೋಪಿಯು ಸಿಟ್ಟಿನಿಂದ ಅವರ ಮನೆಯಲ್ಲಿದ್ದ ಮೂವರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಇದು ಕೊಲೆಯಲ್ಲ ಆಕಸ್ಮಿಕ ಸಾವು ಎಂದು ಬಿಂಬಿಸಲು ಗ್ಯಾಸ್​ ಸ್ಟವ್​ ಆನ್​ ಮಾಡಿದ್ದ.

ಕೊಲೆ ನಡೆದ ಮಾರನೆಯ ದಿನ ಬೆಳಗ್ಗೆ ಸುರಿಂದರ್​ ಕೌರ್​ ನಿವಾಸಕ್ಕೆ ಹಾಲು ಹಾಕುವವ ಬಂದು ಸುಮಾರು ಹೊತ್ತು ಬಾಗಿಲು ಬಡಿದರು ಯಾರು ಬಾರದೇ ಇರದಿದ್ದನ್ನು ಗಮನಿಸಿದ ಆತ ನೆರೆ ಹೊರೆಯವರಿಗೆ ತಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆ ಬಾಗಿಲನ್ನು ಒಡೆದು ಪರಿಶೀಲನೆ ನಡೆಸಿದಾಗ ಮೂವರು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಮನೆಯ ಸುತ್ತ ಹಾಕಲಾಗಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ರಾಬಿನ್​ ಎಂಬಾತ ಕಡೆಯದಾಗಿ ಅವರ ಮನೆ ಪ್ರವೇಶಿಸಿರುವುದು ಬೆಳಕಿಗೆ ಬಂತು . ಕೂಡಲ್ಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಆತನ ಬಳಿ ಇದ್ದ ಮೃತರ ಮೊಬೈಲ್​ ಪೋನ್​ಗಳನ್ನು ಸಹ ವಶಕ್ಕೆ ಪಡೆಲಾಗಿದೆ ಎಂದು ಲುಧಿಯಾನ ಪೊಲೀಸ್​ ಕಮಿಷನರ್​ ಮಂದೀಪ್​ ಸಿಂಗ್​ ಸಿಧು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net