ನಾಗಮಂಗಲ ನಿಗಿನಿಗಿ: ಕೋಮುಗಲಭೆಗೆ 5 ಕೋಟಿ, ರೂ. ಮೌಲ್ಯದ ಆಸ್ತಿ ನಷ್ಟ

naga
Published on

ವಿಜಯವಾಣಿ ಸುದ್ದಿಜಾಲ ನಾಗಮಂಗಲ

ಬುಧವಾರ ಸಂಜೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ್ದ ಕೋಮುಗಲಭೆಯಿಂದ ಹೊತ್ತಿ ಉರಿದಿದ್ದ ನಾಗಮಂಗಲ ಪಟ್ಟಣದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಇಡೀ ಪಟ್ಟಣವನ್ನು ಪೊಲೀಸರು ಸುತ್ತುವರಿದಿರುವ ಪರಿಣಾಮ ತಾಲೂಕು ಕೇಂದ್ರದಲ್ಲಿ ಕರ್ಫ್ಯೂ ಮಾದರಿ ಸ್ಥಿತಿ ನಿರ್ವಣವಾಗಿದೆ.

ಬುಧವಾರ ಪಟ್ಟಣದ ಬದ್ರಿಕೊಪ್ಪಲಿನ ಗಣೇಶ ಮೂರ್ತಿಯನ್ನು ವಿಸರ್ಜನೆ ಗಾಗಿ ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿರುವಾಗ ಮಸೀದಿ ರಸ್ತೆಯಲ್ಲಿ ಸಾಗದಂತೆ ಕೆಲ ಯುವಕರು ತಡೆದಿದ್ದಾರೆ. ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡು ಸಮುದಾಯದ ಯುವಕರ ನಡುವೆ ಗಲಾಟೆ ನಡೆದಿದೆ. ನೋಡನೋಡುತ್ತಿದ್ದಂತೆಯೇ ಪ್ರಕ್ಷುಬ್ಧ ವಾತಾವರಣ ನಿರ್ವಣವಾಗಿದೆ. ಈ ಸಮಯದಲ್ಲಿ ಯುವಕರು ಕಲ್ಲು, ಬಾಟಲಿ ಎಸೆದ ಪರಿಣಾಮ ಮೂವರು ಪೊಲೀಸರು ಹಾಗೂ ಎಂಟು ಜನ ಯುವಕರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ಕಣ್ಣೆದುರು ಕಂಡ ಅಂಗಡಿ, ಷೋರೂಂ, ಬೈಕ್​ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಪರಿಸ್ಥಿತಿ ಕೈ ಮೀರಿ ಹೋಗಿದೆ. ಪರಿಣಮ ಎರಡೂ ಸಮುದಾಯದವರಿಗೆ ಸೇರಿದ ಬಟ್ಟೆ ಅಂಗಡಿ, ಸ್ಕೂಟರ್ ಷೋ ರೂಂ, ಅಲ್ಯುಮಿನಿಯಂ ಪಾತ್ರೆ ಅಂಗಡಿ, ಫ್ಯಾನ್ಸಿ ಸ್ಟೋರಿ, ಗ್ಯಾರೇಜ್ ಸೇರಿದಂತೆ ಹಲವು ಅಂಗಡಿಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಈ ಸಮಯದಲ್ಲಿ ಮಾಜಿ ಶಾಸಕ ಸುರೇಶ್​ಗೌಡ ನಿವಾಸದ ಮೇಲೆಯೂ ಕಲ್ಲು ಎಸೆಯಲಾಗಿದೆ.

ಉದ್ರಿಕ್ತ ಯುವಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಈ ನಡುವೆಯೂ ಕೆಲ ಯುವಕರು ಕಟ್ಟಡದ ಮೇಲಿಂದ ಕಲ್ಲುಗಳನ್ನು ತೂರಿದ್ದಾರೆ. ಈ ಸಮಯದಲ್ಲಿ ಪೆಟ್ರೋಲ್ ತುಂಬಿದ ಬಾಟಲಿಯನ್ನು ಎಸೆಯಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮಾತ್ರವಲ್ಲದೆ ಸಾರ್ವಜನಿಕರು ಹೋಗುತ್ತಿದ್ದ ಕಾರಿನ ಮೇಲೆಯೂ ದಾಳಿ ನಡೆಸಲಾಗಿದೆ. ಅಕ್ಕಪಕ್ಕದ ಜಿಲ್ಲೆಯಿಂದ ಪೊಲೀಸರನ್ನು ಕರೆಸಿ ಪರಿಸ್ಥಿತಿ ಹತೋಟಿಗೆ ತರಲಾಗಿದೆ. ಜತೆಗೆ ರಾತ್ರಿಯೇ ಪೊಲೀಸರು ಎರಡು ಸಮುದಾಯದ ಯುವಕರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕರ ಬಂಧನ ಖಂಡಿಸಿ ಹಿಂದು ಮತ್ತು ಮುಸ್ಲಿಂ ಮಹಿಳೆಯರು ಗುರುವಾರ ಠಾಣೆ ಎದುರು ಪ್ರತಿಭಟನೆ ನಡೆಸಿದರು.

53 ಜನರ ವಿರುದ್ಧ ಎಫ್​ಐಆರ್: ಗಲಭೆಗೆ ಸಂಬಂಧಿಸಿದಂತೆ ಎರಡೂ ಸಮುದಾಯದ 53 ಜನರನ್ನು ವಶಕ್ಕೆ ಪಡೆಯುವ ಮೂಲಕ ತನಿಖೆಯನ್ನು ಚುರುಕುಗೊಳಿಸಲಾಗಿದೆ.

ಗಲಭೆ ಹೆಸರಲ್ಲಿ ಲೂಟಿ: ಕೋಮು ಗಲಭೆಯಿಂದಾಗಿ ಹಲವು ಅಂಗಡಿಗಳು ಸಂಪೂರ್ಣ ನಾಶವಾಗಿವೆ. ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ ಬಟ್ಟೆ ಹಾಗೂ ಸ್ಕೂಟರ್ ಷೋ ರೂಂ ಹಾಳಾಗಿವೆ. ಮಂಡ್ಯ ಹಾಗೂ ಹಾಸನ ಜಿಲ್ಲೆಯ ಅಗ್ನಿಶಾಮಕ ದಳದ ಸಿಬ್ಬಂದಿ ಎಂಟು ವಾಹನ ಬಳಸಿಕೊಂಡು ರಾತ್ರಿ ಪೂರ್ತಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಅಧಿಕಾರಿಗಳ ಕಲೆಹಾಕಿರುವ ಮಾಹಿತಿ ಪ್ರಕಾರ 5 ಕೋಟಿ ರೂ. ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಂತೆಯೇ ಷೋ ರೂಂ ಹಾಳಾಗಿರುವುದರ ಜತೆಗೆ ಎಂಟು ಸ್ಕೂಟರ್​ಗಳನ್ನು ಕದ್ದೊಯ್ಯಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣ ವ್ಯಾಪ್ತಿಯ ಶಾಲೆ, ಕಾಲೇಜಿಗೆ ರಜೆ ಘೊಷಣೆ ಮಾಡಲಾಗಿತ್ತು. ಜತೆಗೆ ಸೆ.14ರವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸೆ.13ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಕೋಮು ಗಲಭೆಯಿಂದಾಗಿ ಗುರುವಾರ ಪಟ್ಟಣದ ಬಹುತೇಕ ಅಂಗಡಿಗಳು ಬಾಗಿಲು ತೆಗೆಯಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಮಾಜಿ ಶಾಸಕ ಸುರೇಶ್​ಗೌಡ ಪ್ರತ್ಯೇಕವಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಬಿಜೆಪಿ ನಾಯಕರ ಭೇಟಿ: ಗುರುವಾರ ಸಂಜೆ ನಾಗಮಂಗಲ ಪಟ್ಟಣಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಹಲವು ನಾಯಕರು ಪರಿಸ್ಥಿತಿ ಅವಲೋಕಿಸಿದರು.

ಇಂದು ಎಚ್​ಡಿಕೆ ಭೇಟಿ : ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೆ.13ರಂದು ಬೆಳಗ್ಗೆ 6 ಗಂಟೆಗೆ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ.

ಸಿಕ್ಕಸಿಕ್ಕಲ್ಲಿ ಬೆಂಕಿ ಇಟ್ಟರು

* ಗಲಭೆಯಿಂದಾಗಿ ಹಲವು ಅಂಗಡಿ ನಾಶ

* ಬಟ್ಟೆ, ಸ್ಕೂಟರ್ ಷೋರೂಂಗೆ ಬೆಂಕಿ

* ಬೆಂಕಿ ನಂದಿಸಿದ 8 ಅಗ್ನಿಶಾಮಕ ವಾಹನ

* ಒಟ್ಟಾರೆ -ಠಿ;5 ಕೋಟಿ ನಷ್ಟದ ಅಂದಾಜು

* ಎಂಟು ಸ್ಕೂಟರ್ ಕದ್ದೊಯ್ದ ಪುಂಡರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net