

ಹೈದರಾಬಾದ್: ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು ಅವರೊಂದಿಗಿನ ವಿಚ್ಛೇದನದ ಬಗ್ಗೆ ನಾಗ ಚೈತನ್ಯ(Naga Chaitanya) ಮೌನಮುರಿದು ಮೊದಲ ಬಾರಿಗೆ ಮಾತನಾಡಿದ್ದಾರೆ. ಇದು ಪರಸ್ಪರ ನಿರ್ಧಾರ, ತಾನು ಮತ್ತು ಸಮಂತಾ ತಮ್ಮ ಜೀವನದಲ್ಲಿ ಮುಂದುವರಿದಿದ್ದೇವೆ ಆದರೆ ಪರಸ್ಪರ ಅಪಾರ ಗೌರವ ಹೊಂದಿದ್ದೇವೆ ಎಂದು ಹೇಳಿದ್ದಾರೆ. ನನ್ನ ತಂದೆ ಮತ್ತು ತಾಯಿಯು ಬೇರ್ಪಟಿದ್ದರು, ವಿಭಜಿತ(ಮುರಿದ) ಕುಟುಂಬದಿಂದ ಬಂದ ನಾನು ಸಂಬಂಧವನ್ನು ಮುರಿಯುವ ಮೊದಲು 1000 ಬಾರಿ ಯೋಚಿಸಿದ್ದೇನೆ ಎಂದು ತಿಳಿಸಿದರು.
ಇತ್ತೀಚೆಗೆ ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗ ಚೈತನ್ಯ, ನಾವು ನಮ್ಮದೇ ಆದ ದಾರಿಯಲ್ಲಿ ಹೋಗಲು ಬಯಸಿದ್ದೆವು. ನಾವು ನಮ್ಮದೇ ಆದ ಕಾರಣಗಳಿಗಾಗಿ ಮತ್ತು ಪರಸ್ಪರ ಗೌರವಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾವು ನಮ್ಮದೇ ಆದ ರೀತಿಯಲ್ಲಿ ಜೀವನದಲ್ಲಿ ಮುಂದುವರಿಯುತ್ತಿದ್ದೇವೆ. ಇದಕ್ಕಿಂತ ಇನ್ನೇನು ಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ. ಪ್ರೇಕ್ಷಕರು ಮತ್ತು ಮಾಧ್ಯಮಗಳು ಅದನ್ನು ಗೌರವಿಸುತ್ತವೆ ಎಂದು ನಾನು ಭಾವಿಸುತ್ತೇನೆ. ನಾವು ಗೌಪ್ಯತೆಯನ್ನು ಕೇಳಿದ್ದೇವೆ. ದಯವಿಟ್ಟು ನಮ್ಮನ್ನು ಗೌರವಿಸಿ ಮತ್ತು ಈ ವಿಷಯದಲ್ಲಿ ನಮಗೆ ಗೌಪ್ಯತೆಯನ್ನು ನೀಡಿ. ಆದರೆ ದುರದೃಷ್ಟವಶಾತ್ ಇದು ಗಾಸಿಪ್ ಆಗಿ ಮಾರ್ಪಟ್ಟಿದೆ ಎಂದಿದ್ದಾರೆ.
ನಾನು ತುಂಬಾ ಘನತೆಯಿಂದ ಮುಂದುವರಿದಿದ್ದೇನೆ. ಅವಳು ಕೂಡ ತುಂಬಾ ಚೆನ್ನಾಗಿ ಪ್ರಗತಿ ಹೊಂದಿದ್ದಾಳೆ. ನಾವು ನಮ್ಮದೇ ಆದ ಜೀವನವನ್ನು ನಡೆಸುತ್ತಿದ್ದೇವೆ. ನನಗೆ ಮತ್ತೆ ಪ್ರೀತಿ ಸಿಕ್ಕಿದೆ ಮತ್ತು ಬಹಳ ಸಂತೋಷವಾಗಿದ್ದೇನೆ. ನಮಗೆ ಪರಸ್ಪರ ಗೌರವವಿದೆ. ಆದರೆ ಇದು ನನ್ನ ಜೀವನದಲ್ಲಿ ಮಾತ್ರ ನಡೆಯುತ್ತಿದೆ ಅಂತಲ್ಲ, ಹಾಗಾದರೆ ನನ್ನನ್ನು ಅಪರಾಧಿಯಂತೆ ಏಕೆ ನಡೆಸಿಕೊಳ್ಳಲಾಗುತ್ತಿದೆ? ಎಂದು ಕೇಳಿದರು.
ಈ ಮದುವೆ ನಮ್ಮಿಬ್ಬರಿಗಾಗಿ ನಮ್ಮ ಒಳಿತಿಗಾಗಿ. ಯಾವುದೇ ನಿರ್ಧಾರವಾಗಿದ್ದರೂ, ಅದನ್ನು ಸಾಕಷ್ಟು ಯೋಚಿಸಿ ಮತ್ತು ಗೌರವದಿಂದ ತೆಗೆದುಕೊಳ್ಳಲಾಗಿದೆ ಎಂದು ನಾಗ ಚೈತನ್ಯ ಹೇಳಿದರು. ಇದು ನನಗೆ ಬಹಳ ಸೂಕ್ಷ್ಮ ವಿಷಯವಾಗಿರುವುದರಿಂದ ನಾನು ಇದನ್ನು ಹೇಳುತ್ತಿದ್ದೇನೆ. ನಾನು ಬ್ರೋಕನ್ ಫ್ಯಾಮಿಲಿಯಿಂದ (ಮುರಿದ ಕುಟುಂಬದಿಂದ) ಬಂದವನು. ಆದ್ದರಿಂದ ಅನುಭವ ಹೇಗಿರುತ್ತದೆ ಎಂದು ನನಗೆ ತಿಳಿದಿದೆ. ನಾನು ಬೇರೆಯಾಗುವ ಮೊದಲು 1000 ಬಾರಿ ಯೋಚಿಸುತ್ತೇನೆ ಏಕೆಂದರೆ ಅದರ ಪರಿಣಾಮಗಳು ನನಗೆ ತಿಳಿದಿವೆ. ಅದು ಪರಸ್ಪರ ನಿರ್ಧಾರವಾಗಿತ್ತು.
ನಾನು ರಾತ್ರೋರಾತ್ರಿ ಖಿನ್ನತೆಗೆ ಒಳಗಾದವನಲ್ಲ. ಇದು ಸಂಭವಿಸಿದ್ದಕ್ಕೆ ನನಗೆ ಬೇಸರವಾಗುತ್ತಿದೆ, ಆದರೆ ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ. ನಿಮ್ಮನ್ನು ನೀವು ಅಭಿವೃದ್ಧಿಪಡಿಸಿಕೊಳ್ಳಿ, ಮುಂದುವರಿಯಿರಿ ಮತ್ತು ಶೀಘ್ರದಲ್ಲೇ ನೀವು ಸರಿಯಾದ ಮಾರ್ಗವನ್ನು ಕಂಡುಕೊಳ್ಳುವಿರಿ. ಇದು ನನಗೆ ಸಂಭವಿಸಿದ್ದು ಎಂದು ಹೇಳಿದರು. ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2021ರಲ್ಲಿ ಇಬ್ಬರೂ ಬೇರ್ಪಟ್ಟರು. ಇತ್ತೀಚೆಗೆ ನಾಗಚೈತನ್ಯ ಶೋಭಿತಾ ಧೂಳಿಪಾಲ ಅವರನ್ನು ವಿವಾಹವಾಗಿದ್ದಾರೆ.(ಏಜೆನ್ಸೀಸ್)