

ಬೆಂಗಳೂರು: ಕಾಂಗ್ರೆಸ್ ಪಾಲಿಗೆ ಕರ್ನಾಟಕ ಸರ್ಕಾರ ಖಜಾನೆ ಇದ್ದಂತೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎನ್.ರವಿಕುಮಾರ್, "ಸಿದ್ದರಾಮಯ್ಯನವರು ಅಧಿಕೃತವಾಗಿ ಮತ್ತು ಅನಧಿಕೃತವಾಗಿ ವಸೂಲಿ ಮಾಡುವ ತೆರಿಗೆ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿದಿದೆ. ಸಿದ್ದರಾಮಯ್ಯ ಅವರು ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಜೊತೆಗೆ ಇದ್ದವರು. ಹಾಗಾಗಿ ಸಿದ್ದರಾಮಯ್ಯ ಏನೆಂದು ಅವರಿಗೆ ಸರಿಯಾಗಿ ಗೊತ್ತಿದೆ" ಎಂದು ಹೇಳಿದರು.
ವೈಎಸ್‍ಟಿ ತೆರಿಗೆ ವಿಷಯವನ್ನು ಮುನ್ನೆಲೆಗೆ ತಂದ ಕುಮಾರಸ್ವಾಮಿಗೆ ಅಭಿನಂದನೆಗಳು ಎಂದು ಹೇಳಿದ ಎನ್.ರವಿಕುಮಾರ್, "ಸಿದ್ದರಾಮಯ್ಯ ಅವರು ಹಾಕಿದ ತೆರಿಗೆಯನ್ನು ಯತೀಂದ್ರ ವಸೂಲಿ ಮಾಡುತ್ತಿದ್ದಾರೆ. ಮೈಸೂರು, ಹುಬ್ಬಳ್ಳಿ ಮತ್ತಿತರ ಕಡೆ ಹಾಗೂ ರಾಜ್ಯದ ವಿವಿದೆಡೆ ಇದರ ಕುರಿತು ಮಾತನಾಡುತ್ತಿದ್ದಾರೆ. ಕೇವಲ ವೈಎಸ್‍ಟಿ ಮಾತ್ರವಲ್ಲ, ವಿಎಸ್‍ಟಿಯೂ ಇದೆ. ವೇಣುಗೋಪಾಲ್-ಸಿದ್ದರಾಮಯ್ಯ ಟ್ಯಾಕ್ಸ್ ಕೂಡ ಇದೆ. ವಿಎಸ್‍ಟಿಯನ್ನು ವೇಣುಗೋಪಾಲ್ ಸಂಗ್ರಹಿಸುತ್ತಾರೆ. ಹಾಗಾಗಿ ಇದು ವಿಎಸ್‍ಟಿ ಸರಕಾರ" ಎಂದು ಆರೋಪಿಸಿದರು.
"ಇಲ್ಲಿ ಸಿದ್ದರಾಮಯ್ಯ ಅವರು ವಿಧಿಸಿದ ತೆರಿಗೆಯನ್ನು ವೇಣುಗೋಪಾಲ್ ಡ್ರಾ ಮಾಡುತ್ತಾರೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಸರಕಾರ ಖಜಾನೆ ಇದ್ದಂತೆ. ಈ ಗ್ಯಾರಂಟಿ ಎಂದರೆ ಒಂದು ಕೈಯಲ್ಲಿ ತೆಗೆದುಕೊಂಡು ಇನ್ನೊಂದು ಕೈಯಲ್ಲಿ ಕೊಡುವುದು" ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಎನ್.ರವಿಕುಮಾರ್ ಆರೋಪಿಸಿದ್ದಾರೆ.