

ಮೈಸೂರು: ನೆರೆ ರಾಜ್ಯ ಕೇರಳದ ಕೋಳಿಗಳಲ್ಲಿ ಹಕ್ಕಿಜ್ವರದ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ನಗರದಲ್ಲಿ ಸಂಭವಿಸಿರುವ ಕೊಕ್ಕರೆಗಳ ಸಾವು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.
ಮೈಸೂರಿನ 55ನೇ ವಾರ್ಡ್ ವ್ಯಾಪ್ತಿಯಲ್ಲಿ ವಾರದಿಂದ ಅಂದಾಜು 12 ಕೊಕ್ಕರೆಗಳು ಮೃತಪಟ್ಟಿವೆ. ಪ್ರತಿ ದಿನ ಕೊಕ್ಕರೆಗಳು ಸಾಯುತ್ತಿವೆ. ಹೀಗಾಗಿ ಹಕ್ಕಿಜ್ವರ ಹರಡಿರಬಹುದು ಎನ್ನುವ ಭೀತಿ ಸಾರ್ವಜನಿಕರಿಗೆ ಎದುರಾಗಿದೆ.
ಮಹಾನಗರ ಪಾಲಿಕೆಯ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಾಗರಾಜ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಮೃತ ಕೊಕ್ಕರೆಗಳ ಅಂಗಾಂಶವನ್ನು ಸಂಗ್ರಹಿಸಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ವಾರದಲ್ಲಿ 12 ಕೊಕ್ಕರೆಗಳು ಮೃತಪಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಹಕ್ಕಿಜ್ವರದ ವೈರಸ್ನಿಂದ ಕೊಕ್ಕರೆಗಳು ಮೃತಪಟ್ಟಿರಬಹುದು ಎಂದು ನಿರ್ದೇಶಕ ಡಾ.ನಾಗರಾಜ್ ತಿಳಿಸಿದ್ದಾರೆ.
ನಗರದಲ್ಲಿ ಕೋಳಿಗಳನ್ನು ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. (ದಿಗ್ವಿಜಯ ನ್ಯೂಸ್)