

ಪತ್ತನಂತಿಟ್ಟ: ಕೇರಳದಲ್ಲಿ ಐದು ಮಂದಿಗೆ ಕೊರೊನಾ ಸೋಂಕು ತಗುಲಿದ್ದು ನಿನ್ನೆ ವರದಿಯಾಗಿದೆ. ಇಟಲಿಯಿಂದ ಮಗನೊಂದಿಗೆ ಆಗಮಿಸಿದ್ದ ದಂಪತಿ ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದರು.
ಆ ಇಬ್ಬರು ಸಂಬಂಧಿಕರು ಜ್ವರದಿಂದ ಆಸ್ಪತ್ರೆಗೆ ದಾಖಲಾದಾಗಲೇ ಅವರಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು. ಬಳಿಕ ದಂಪತಿಯನ್ನೂ ತಪಾಸಣೆಗೆ ಒಳಪಡಿಸಿ ಆಸ್ಪತ್ರೆಯೊಂದರ ಪ್ರತ್ಯೇಕ ವಾರ್ಡ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಈಗ ಕೇರಳದಲ್ಲಿ ಆರನೇ ಪ್ರಕರಣ ಪತ್ತೆಯಾಗಿದೆ. ಮೂರು ವರ್ಷದ ಮಗುವಿನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಮಗುವಿನ ಕುಟುಂಬವೂ ಇಟಲಿಯಿಂದಲೇ ಆಗಮಿಸಿತ್ತು. ಅವರು ಮಾರ್ಚ್ 7ರಂದು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಅಲ್ಲಿ ಸಾರ್ವತ್ರಿಕ ಸ್ಕ್ರೀನ್ ಟೆಸ್ಟ್ ವೇಳೆ ಮಗುವಿನಲ್ಲಿ ಸೋಂಕಿನ ಲಕ್ಷಣ ಕಂಡುಬಂದಿತ್ತು. ರಕ್ತದ ಮಾದರಿ ತಪಾಸಣೆಯ ವರದಿ ಸೋಮವಾರ (ಇಂದು) ಬಂದಿದ್ದು, ಅದರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.
ಸದ್ಯ ಎರ್ನಾಕುಲಂ ವೈದ್ಯಕೀಯ ಕಾಲೇಜಿನ ಪ್ರತ್ಯೇಕ ವಾರ್ಡ್ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. (ಏಜೆನ್ಸೀಸ್)