ಅಪ್ಪನ ಹೆಗಲ ಮೇಲೆ ಕೂತು ಮೈಸೂರು ದಸರಾ ನೋಡಿದ್ದೇನೆ; ಬಾಲ್ಯದ ದಸರಾ ನೆನಪುಗಳನ್ನು ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ

CM siddaramaiah
Published on

ಮೈಸೂರು: ವಿಶ್ವವಿಖ್ಯಾತ 414ನೇ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಮೈಸೂರು ದಸರಾ ಉದ್ಘಾಟನೆಯ ಬಳಿಕ ಸಮಾರಂಭವನ್ನುದ್ದೇಶಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಾಲ್ಯದ ದಸರಾ ಆಚರಣೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ದಸರಾ ಉದ್ಘಾಟನಾ ನಂತರ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾನು ಚಿಕ್ಕವನಾಗಿದ್ದಾಗ ನಮ್ಮ ಅಪ್ಪ ದಸರಾಕ್ಕೆ ಕರೆದು ಕೊಂಡು ಬರುತ್ತಿದ್ದರು. ನಾನು ನನ್ನ ಅಪ್ಪನ ಹೆಗಲ ಮೇಲೆ ಕೂತು ಮೈಸೂರು ದಸರಾ ನೋಡಿದ್ದೇನೆ. ಆಗ ನನಗೆ ಐದಾರು ವರ್ಷ. ನೋಡು ನೋಡು ಮೈಸೂರು ಮಹಾರಾಜ ಅಂತೀದ್ದರು. ನಮಗೆ ಕಾಣದೆ ಇದ್ದರು ನಮಸ್ಕಾರ ಮಾಡ್ಡಿದ್ದೆ ಎಂದು ಬಾಲ್ಯದ ದಸರಾ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಮೈಸೂರಿಗೆ ಓದಲು ಬಂದಾಗ ಪ್ರತಿ ದಸರಾದಲ್ಲೂ ತಪ್ಪದೆ ವಸ್ತು ಪ್ರದರ್ಶನಕ್ಕೆ ಹೋಗುತ್ತಿದ್ದೇನು. ದಸರಾ ಮೂಲಕ‌ ನಾಡಿನ ಕಲೆ, ಸಂಸ್ಕೃತಿಯನ್ನು ದೇಶಕ್ಕೆ ತಿಳಿಸುತ್ತಿದ್ದೇನೆ. ರಾಜ್ಯದ ಅಭಿವೃದ್ಧಿಯನ್ನು ಜನರಿಗೆ ತಿಳಿಸುವ ಕಾರ್ಯವನ್ನು ದಸರಾ ಮೆರವಣಿಗೆ ಮೂಲಕ ಮಾಡುತ್ತೇವೆ. ಇಡೀ ಜಗತ್ತಿಗೆ ಕನ್ನಡ ನಾಡಿನ ವೈಭೋಗ ತಿಳಿಸುವ ಕಾರ್ಯ ದಸರಾ ಮೂಲಕ ಆಗುತ್ತಿದೆ ಎಂದು ಹೇಳಿದ್ದಾರೆ.

ಕಲೆ, ಸಂಸ್ಕೃತಿ, ಸಂಪ್ರದಾಯ ನಮ್ಮ ನಾಡು ಶ್ರೀಮಂತವಾಗಿದೆ. ಕರ್ನಾಟಕ ಜನ ಸುಸಂಸ್ಕೃತ ಜನ. ನಮ್ಮಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿದೆ. ಪರಸ್ಪರ ಪ್ರೀತಿ, ವಿಶ್ವಾಸ, ಗೌರವದಿಂದ ಬದುಕುವುದು ಮುಖ್ಯ. ದೇಶ ಮತ್ತು ರಾಜ್ಯಕ್ಕೆ ಇದು ತುಂಬಾ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಸಚಿವರಾದ ಕೆ. ವೆಂಕಟೇಶ್ ,ಕೆ. ಜೆ. ಜಾರ್ಜ್, ಶಿವರಾಜ್ ತಂಗಡಗಿ, ಸಂಸದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಶಿವಕುಮಾರ್, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಇತರ ಗಣ್ಯರು ಭಾಗಿಯಾಗಿದ್ದರು. ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲು ಚಾಮುಂಡಿ ಪೂಜೆ, ಕಂಕಣಧಾರಣೆ ಸೇರಿ ಹಲವು ವಿಧಿವಿಧಾನಗಳು ನಡೆದವು.

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಅ.24ರವರೆಗೂ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕೈಗೊಳ್ಳಲಾಗಿದೆ. ದಸರಾ ಕಾರ್ಯಕ್ರಮಗಳು ನಡೆಯಲಿರುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮೈಸೂರು ನಗರ ಸೇರಿದಂತೆ ಇತರೆ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಓರ್ವ ಡಿಐಜಿ, 11 ಎಸ್ಪಿ, 410 ಪೊಲೀಸ್ ಅಧಿಕಾರಿಗಳು, 3778 ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 4200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಶಸ್ತ್ರ ಪಡೆಗಳು, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಗರುಡ ಪಡೆ ಸಹ ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net