

ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧದ ನಡುವೆ ಜೆಎನ್ ಯು ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಹೇಳಿಕೆ ನೀಡಿದ್ದು, ಭಾರತೀಯರು ಅದೃಷ್ಟವಂತರು ಮತ್ತು ಕಾಶ್ಮೀರದಲ್ಲಿ "ದೀರ್ಘಕಾಲದ ಶಾಂತಿ ಮತ್ತು ಭದ್ರತೆ" ಯನ್ನು ಖಾತ್ರಿಪಡಿಸಿದ್ದಕ್ಕಾಗಿ ಸರ್ಕಾರ ಮತ್ತು ಭದ್ರತಾ ಪಡೆಗಳಿಗೆ ಧನ್ಯವಾದ ಎಂದು ಹೇಳಿದ್ದಾರೆ.
ದ್ರತೆಯಿಲ್ಲದೆ ಶಾಂತಿ ಅಸಾಧ್ಯ ಎಂಬುದನ್ನು ಮಧ್ಯಪ್ರಾಚ್ಯ ಬಿಕ್ಕಟ್ಟು ತೋರಿಸುತ್ತದೆ. ಕೆಚ್ಚೆದೆಯ ಭಾರತೀಯ ಸೇನೆ ಜತೆಗೆ ಜಮ್ಮು ಮತ್ತು ಕಾಶ್ಮೀರದ ಪೋಲೀಸರು ಕಾಶ್ಮೀರದಲ್ಲಿ ದೀರ್ಘಾವಧಿಯ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಇದು ಜನತೆಗೆ ಕೊಟ್ಟ ಭದ್ರತೆ ಹಿಂದೆ ಅಪಾರ ತ್ಯಾಗವು ಸಹ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಮಾಡಿ ಹೇಳಿದ್ದಾರೆ.
2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ಹಿಂತೆಗೆದುಕೊಳ್ಳುವ ಮತ್ತು ರಾಜ್ಯವನ್ನು ವಿಭಜಿಸುವ ನಿರ್ಧಾರ ತೆಗೆದುಕೊಂಡಾಗ ಶೆಹ್ಲಾ ರಶೀದ್ ವಿರೋಧಿಸಿದ್ದರು. 2016 ರ ಜೆಎನ್‌ಯುನಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಹಿನ್ನೆಲೆಯಲ್ಲಿ ಶೆಹ್ಲಾ ಸೇರಿದಂತೆ ವಿದ್ಯಾರ್ಥಿ ನಾಯಕರನ್ನು ಬಂಧಿಸಿದ್ದನ್ನು ಸ್ಮರಿಸಬಹುದು.
ನರೇಂದ್ರ ಮೋದಿ ಸರ್ಕಾರವನ್ನು ತೀವ್ರವಾಗಿ ವಿರೋಧಿಸುತ್ತ ಬಂದಿರುವ ಶೆಹ್ಲಾರಶೀದ್ ಇತ್ತೀಚೆಗೆ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದದ್ದು ಸೇರಿ ಹಲವು ವಿಷಯಗಳಲ್ಲಿ ಕೇಂದ್ರವನ್ನು ಬೆಂಬಲಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಯಲ್ಲಿ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ದಾಖಲೆ ಸುಧಾರಿಸಿದೆ ಎಂದು ಶ್ರೀಮತಿ ರಶೀದ್ ಹೇಳಿದ್ದಾರೆ.