

ಮೈಸೂರು: ವಿಶ್ವವಿಖ್ಯಾತ 414ನೇ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಅದ್ಧೂರಿ ಚಾಲನೆ ಸಿಕ್ಕಿದೆ. ಬೆಳಗ್ಗೆ 10:15ರಿಂದ 10.36ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಹಾಸ್ಯ ನರಸಿಂಹರಾಜು ಜನ್ಮ ಶತಮಾನೋತ್ಸವ ಹಿನ್ನೆಲೆ, ನರಸಿಂಹ ರಾಜು ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪನಮನ ಸಲ್ಲಿಸಿದ್ದಾರೆ. ವೇದಿಕೆ ಪರದೆಯ ಮೇಲೆ ನರಸಿಂಹರಾಜು ಜೀವನ ಕುರಿತ ವಿಡಿಯೋ ಪ್ರದರ್ಶನ ಕೂಡ ನಡೆದಿದೆ.
112 ಚಿತ್ರಗಳು ಪ್ರದರ್ಶನ: ನಾಳೆಯಿಂದ 7 ದಿನಗಳ ಕಾಲ ನಡೆಯಲಿರುವ ದಸರಾ ಫಿಲ್ಮ್ ಫೆಸ್ಟ್ ನಡೆಯಲಿದ್ದು, ಮಲ್ಟಿಪ್ಲೆಕ್ಸ್‌ನ 4 ಪರದೆಗಳಲ್ಲಿ ಒಟ್ಟು 112 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ (Inox) ಹಾಗೂ ಡಿಆರ್‌ಸಿ ಸಿನೆಮಾ ಮಂದಿರದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ.
ವಿಶ್ವ ಚಲನಚಿತ್ರ, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಕಿರು ಚಿತ್ರ ಹಾಗೂ ಮಕ್ಕಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸಂದೇಶ ಸಾರುವ, ಪ್ರಶಸ್ತಿ ಪುರಸ್ಕೃತ ಸೂಪರ್ ಹಿಟ್ ಸಿನೆಮಾಗಳ ಆಯ್ಕೆ ಕೂಡಾ ಇರಲಿದೆ.
ಯಾವುದೆಲ್ಲ ಚಿತ್ರಗಳು?: ಇತ್ತೀಚೆಗೆ ಸಕ್ಸಸ್ ಕಂಡ ಕಾಂತಾರ, ಸಪ್ತ ಸಾಗರದಾಚೆ ಎಲ್ಲೋ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸೇರಿದಂತೆ ಹಲವು ಕನ್ನಡ ಸಿನೆಮಾ ಪ್ರದರ್ಶನವಾಗಲಿವೆ.
ಟಿಕೆಟ್ ದರ ಎಷ್ಟು?: ಸಾರ್ವಜನಿಕರಿಗೆ 500, ವಿದ್ಯಾರ್ಥಿಗಳಿಗೆ 300ರೂ ಟಿಕೆಟ್ ದರ ನಿಗದಿ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಒಟ್ಟು 4 ಪರದೆಗಳಲ್ಲಿ ಸಿನೆಮಾ ಪ್ರದರ್ಶನಗೊಳ್ಳಲಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಅ.24ರವರೆಗೂ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕೈಗೊಳ್ಳಲಾಗಿದೆ. ದಸರಾ ಕಾರ್ಯಕ್ರಮಗಳು ನಡೆಯಲಿರುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮೈಸೂರು ನಗರ ಸೇರಿದಂತೆ ಇತರೆ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಓರ್ವ ಡಿಐಜಿ, 11 ಎಸ್ಪಿ, 410 ಪೊಲೀಸ್ ಅಧಿಕಾರಿಗಳು, 3778 ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 4200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಶಸ್ತ್ರ ಪಡೆಗಳು, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಗರುಡ ಪಡೆ ಸಹ ನಿಯೋಜಿಸಲಾಗಿದೆ.