ಮ್ಯಾನ್ಮಾರ್ ಆಂತಕರಿ ಸಂಘರ್ಷ; ವಾಯುದಾಳಿಗೆ ಕನಿಷ್ಠ 19 ಶಾಲಾ ಮಕ್ಕಳು ಸಾವು| Air strike

Untitled design (12)
Published on

Air strike: ಮ್ಯಾನ್ಮಾರ್​ನಲ್ಲಿ ಆಂತರಿಕ ಸಂಘರ್ಷ ಮುಂದುವರೆದಿದ್ದು, ಪಶ್ಚಿಮ ರಾಖೈನ್ ಪ್ರಾಂತ್ಯದಲ್ಲಿ ಜುಂಟಾ ಏರ್​ಸ್ಟ್ರೈಕ್​ನಲ್ಲಿ ಕನಿಷ್ಠ 19 ಶಾಲಾ ಮಕ್ಕಳು ಮೃತಪಟ್ಟಿದ್ದಾರೆ ಎಂದು ಜನಾಂಗೀಯ ಅಲ್ಪಸಂಖ್ಯಾತ ಸಶಸ್ತ್ರ ಗುಂಪು ಮಾಹಿತಿ ನೀಡಿದೆ ಎಂದು ಶನಿವಾರ(ಸೆ. 13) ವರದಿಯಾಗಿದೆ.

2021ರಲ್ಲಿ ಆಂಗ್ ಸಾನ್ ಸೂ ಕಿ ಅವರ ನಾಗರಿಕ ಸರ್ಕಾರವನ್ನು ಉರುಳಿಸಿ ಸೇನೆ ಆಡಳಿತ ವಹಿಸಿಕೊಂಡ ಬಳಿಕ ರಾಖೈನ್ ಪ್ರಾಂತ್ಯದಲ್ಲಿ ಸಶಸ್ತ್ರ ದಂಗೆ ಶುರುವಾಗಿದ್ದು, ರಕ್ತಸಿಕ್ತಕ್ಕೆ ಕಾರಣವಾಗಿದೆ. ಕಳೆದ ವರ್ಷ ರಾಖೈನ್ ಪ್ರಾಂತ್ಯದ ಹಲವು ಪ್ರದೇಶಗಳನ್ನು ಅರಾಕನ್ ಸೇನೆ ವಶಪಡಿಸಿಕೊಂಡಿದೆ. ಮ್ಯಾನ್ಮಾರ್‌ನ ಆಡಳಿತಾರೂಢ ಸೇನೆಯೊಂದಿಗೆ ತೀವ್ರ ಹೋರಾಟದಲ್ಲಿ ತೊಡಗಿದೆ.

ಕ್ಯುಕ್ತಾವ್ ಟೌನ್‌ಶಿಪ್‌ನಲ್ಲಿರುವ ಎರಡು ಖಾಸಗಿ ಪ್ರೌಢಶಾಲೆಗಳ ಮೇಲೆ ಶುಕ್ರವಾರ ಮಧ್ಯರಾತ್ರಿಯ ನಂತರ ದಾಳಿ ನಡೆದಿದ್ದು, 15 ರಿಂದ 21 ವರ್ಷದೊಳಗಿನ 19 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 22 ಮಂದಿ ಗಾಯಗೊಂಡಿದ್ದಾರೆ ಎಂದು ಅರಾಕನ್ ಸೇನೆ ಶನಿವಾರ ಟೆಲಿಗ್ರಾಮ್‌ನಲ್ಲಿ ಮಾಹಿತಿ ನೀಡಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಸ್ಥಳೀಯ ಮಾಧ್ಯಮ ಸಂಸ್ಥೆ ಮ್ಯಾನ್ಮಾರ್ ನೌ ವರದಿ ಪ್ರಕಾರ, ವಿದ್ಯಾರ್ಥಿಗಳು ಮಲಗಿದ್ದಾಗ ಜುಂಟಾ ಯುದ್ಧ ವಿಮಾನವು ಪ್ರೌಢಶಾಲೆಯ ಮೇಲೆ ಎರಡು ಬಾಂಬ್‌ಗಳನ್ನು ಹಾಕಿದೆ ಎಂದು ತಿಳಿಸಿದೆ.

ಶಾಲೆ ಮೇಲೆ ಏರ್​ಸ್ಟ್ರೈಕ್​ ಅನ್ನು ಖಂಡಿಸಿರುವ ಯುನಿಸೆಫ್​, ರಾಖೈನ್​ನಲ್ಲಿ ಹೆಚ್ಚುತ್ತಿರುವ ವಿನಾಶಕಾರಿ ಹಿಂಸಾಚಾರದ ಮಾದರಿಗೆ ಇದು ಸೇರ್ಪಡೆಯಾಗಿದ್ದು, ಮಕ್ಕಳು ಮತ್ತು ಕುಟುಂಬಗಳು ಬೆಲೆಯನ್ನು ತೆರಬೇಕಾಗಿದೆ. ಇದು ಅತ್ಯಂತ ಕ್ರೂರ ದಾಳಿ ಎಂದು ಕರೆದಿದೆ.

ಮ್ಯಾನ್ಮಾರ್​ನಾದ್ಯಂತ ಹಲವು ಪ್ರದೇಶಗಳಲ್ಲಿ ತನ್ನ ಆಡಳಿತಕ್ಕೆ ವಿರುದ್ಧವಾದ ಯಾವುದೇ ಹೋರಾಟವನ್ನು ಮ್ಯಾನ್ಮಾರ್ ಸೇನೆ ಸಹಿಸಿಕೊಳ್ತಿಲ್ಲ ಎನ್ನಲಾಗಿದೆ. ಹೋರಾಟಗಳನ್ನು ಎದುರಿಸಲು ಹೆಣಗಾಡುತ್ತಿದ್ದು, ಪ್ರತಿರೋಧ ತೋರಿದ ನಾಗರಿಕರ ಮೇಲೆ ವಾಯುದಾಳಿ, ಫಿರಂಗಿ ದಾಳಿಗಳನ್ನು ಬಳಸುತ್ತಿದೆ ಎಂದು ಆರೋಪಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net