ಮ್ಯಾನ್ಮಾರ್​ ಭೂಕಂಪ: 2000 ಗಡಿದಾಟಿದ ಮೃತರ ಸಂಖ್ಯೆ! ಒಂದು ವಾರ ಶೋಕಾಚರಣೆಗೆ ಕರೆ | Myanmar

ವಿಜಯವಾಣಿ - 2025-03-31T191439.373
Published on

Myanmar: ಮ್ಯಾನ್ಮಾರ್​, ಬ್ಯಾಂಕಾಕ್​ ದೇಶಗಳಲ್ಲಿ ಸಂಭವಿಸಿರುವ ಭಾರೀ ಭೂಕಂಪನ ಜನರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಬೃಹತ್​ ಕಟ್ಟಡಗಳು, ರಸ್ತೆ, ಸೇತುವೆಗಳ ಕುಸಿತ, ಸಾವು-ನೋವು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ನಿನ್ನೆಯವರೆಗೂ ಮ್ಯಾನ್ಮಾರ್​ನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 1700ಕ್ಕೆ ತಲುಪಿತ್ತು. ಆದರೆ, ಇಂದು ಸಹ ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದ್ದು, ಮೃತರ ಸಂಖ್ಯೆ ಈಗ 2000 ಗಡಿದಾಟಿದೆ.

ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಮ್ಯಾನ್ಮಾರ್ ಸರ್ಕಾರ ಒಂದು ವಾರ ರಾಷ್ಟ್ರೀಯ ಶೋಕಾಚರಣೆಗೆ ಕರೆ ನೀಡಿದೆ. ಸಾವಿನ ಸಂಖ್ಯೆ 2,000 ದಾಟಿದ್ದು, ಅತಿ ಎತ್ತರದ ಕಟ್ಟಡಗಳ ಅವಶೇಷಗಳಲ್ಲಿ ಸಿಲುಕಿರುವವರನ್ನು ಜೀವಂತವಾಗಿ ಹೊರತರುವ ಭರವಸೆ ಸದ್ಯ ಮಸುಕಾಗಿದೆ. ಶುಕ್ರವಾರದಂದು (ಮಾ.28) ಸಂಭವಿಸಿದ 7.7 ತೀವ್ರತೆಯ ಭೂಕಂಪಕ್ಕೆ ಊಹೆಗೂ ಮೀರಿದ ಜನರು ದುರಂತ ಅಂತ್ಯ ಕಂಡಿದ್ದಾರೆ. ಈ ಹಿನ್ನೆಲೆ ಏಪ್ರಿಲ್ 6ರವರೆಗೆ ರಾಷ್ಟ್ರೀಯ ಧ್ವಜಗಳು ಅರ್ಧ ಮಟ್ಟದಲ್ಲಿ ಹಾರಲಿವೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂಬುದನ್ನು ವಿವರಿಸುವುದು ಕಷ್ಟಸಾಧ್ಯ. ಪ್ರತಿನಿಮಿಷವು ನರಕ ಎಂಬಂತೆ ಭಾಸವಾಗುತ್ತಿದೆ. ಇಲ್ಲಿನ ಸ್ಥಿತಿ-ಗತಿಯನ್ನು ವ್ಯಕ್ತಪಡಿಸುವುದು ತೀರ ನೋವಿನ ಸಂಗತಿ" ಎಂದು ಮಂಡಲೆಯ ಸಜ್ಜಾ ಉತ್ತರ ಮಸೀದಿಯ ಮುಖ್ಯ ಆಡಳಿತಾಧಿಕಾರಿ ಆಂಗ್ ಮೈಂಟ್ ಹುಸೇನ್ ಹೇಳಿದ್ದಾರೆ. ಇಲ್ಲಿಯವರೆಗೂ ಲಭಿಸಿರುವ ಮಾಹಿತಿ ಪ್ರಕಾರ, ಸಾವಿನ ಸಂಖ್ಯೆ 2,056ಕ್ಕೆ ತಲುಪಿದ್ದು, 3,900ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು 270 ಜನರು ನಾಪತ್ತೆಯಾಗಿದ್ದಾರೆ ಎಂದು ಜುಂಟಾ ತಿಳಿಸಿದೆ.

ಭೂಕಂಪಕ್ಕೆ ತತ್ತರಿಸಿರುವ ಥೈಲಾಂಡ್​ ಮತ್ತು ಮ್ಯಾನ್ಮಾರ್​ ದೇಶಗಳಿಗೆ ಭಾರತ, ಚೀನಾ, ಅಮೆರಿಕ ಸೇರಿದಂತೆ ಇತರೆ ದೊಡ್ಡ ದೇಶಗಳು ಸಹಾಯಹಸ್ತ ನೀಡಲು ಮುಂದಾಗಿವೆ. ಆದರೂ, ಮ್ಯಾನ್ಮಾರ್​ ದೇಶದ ಪರಿಸ್ಥಿತಿ ಅತೀವ ದುಃಖವನ್ನು ತಂದೊಡ್ಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net