

ಕೊಪ್ಪಳ: ಕಾಂಗ್ರೆಸ್ ಮುಸ್ಲಿಮರ ಪಕ್ಷ. ಈ ಜನ್ಮದಲ್ಲಿ ನಾನು ಆ ಪಕ್ಷಕ್ಕೆ ಹೋಗುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟಲ್ ಯತ್ನಾಳ್ ತಿಳಿಸಿದರು.
ಬಿಜೆಪಿ ಹಿಂದುಪರವಾಗಿಲ್ಲ. ಯಡಿಯೂರಪ್ಪನ ಮಾತು ಕೇಳಿ ನನ್ನನ್ನು ಉಚ್ಚಾಟಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗಳು ಪೂರ್ಣಗೊಂಡರೆ ಉಕ ಭಾಗ ಅಭಿವೃದ್ಧಿ ಹೊಂದುತ್ತದೆ. ಸಿಎಂ ಆದರೆ 25 ಸಾವಿರ ಕೋಟಿ ರೂ.ಕೊಡುವೆ ಎಂದ ಯಡಿಯೂರಪ್ಪ 2,500 ಕೋಟಿ ರೂ.ಸಹ ಕೊಡಲಿಲ್ಲ. ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವರಿದ್ದರು. ಅವರನ್ನೇ ಕೇಳಿ ಎಷ್ಟು ಕೊಟ್ಟಿದ್ದಾರೆಂದು. ವೀರಶೈವ ಲಿಂಗಾಯತರ ಮೀಸಲು ತಪ್ಪಿಸಿದ್ದು ಸಹ ವಿಜಯೇಂದ್ರ, ಯಡಿಯೂರಪ್ಪ. ನಮ್ಮನ್ನೆಲ್ಲ ಹೊಡೆಸಿ, ಜೈಲಿಗೆ ಹಾಕಿಸಬೇಕೆಂದು ಸಂಚು ಮಾಡಿ ಬೆಂಗಳೂರಿನ ಐಪಿಎಸ್ ಅಧಿಕಾರಿಯನ್ನು ಕೊಟ್ಟು ಕಳಿಸಿದರು.ಆತ ವಿಜಯೇಂದ್ರನ ಚಮಚಾಗಿರಿ ಮಾಡುತ್ತಾನೆ. ಡ್ರಗ್ಸ್ ಪ್ರಕರಣ ಬಯಲು ಮಾಡುವೆ ಎಂದು ಓಡಾಡಿ ಚಿತ್ರನಟಿಯರ ಮೊಬೈಲ್ನಲ್ಲಿದ್ದ ವಿಜಯೇಂದ್ರನ ವಿಡಿಯೋ ಡಿಲೀಟ್ ಮಾಡಿದ್ದಾನೆಂದು ಸೋಮವಾರ ಕೊಪ್ಪಳದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಆರೋಪಿಸಿದರು.
ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದಾಗ ವಿಜಯೇಂದ್ರನಿಗೆ ಹಣ ಸಿಗಲಿಲ್ಲ. ಅದಕ್ಕೆ ಜಾರಕಿಹೊಳಿಯನ್ನು ಹನಿಟ್ರಾ$್ಯಪ್ನಲ್ಲಿ ಸಿಲುಕಿಸಿ ತಲೆದಂಡ ಮಾಡಿದ. ಕಾಂಗ್ರೆಸ್ನ ಮಹಾನಾಯಕ, ಬಿಜೆಪಿಯ ಮಹಾಕಳ್ಳ ಇಬ್ಬರೂ ಕೂಡಿ ಸಿಡಿ ಬಿಡುಗಡೆ ಮಾಡಿದರು. ಬಿಎಸ್ವೈ, ಬಿವೈವಿ ಸಾಕಷ್ಟು ಹಗರಣ ಮಾಡಿ ಸಾವಿರಾರು ಕೋಟಿ ರೂ.ಗಳಿಸಿದ್ದಾರೆ. ಕೋವಿಡ್ನಲ್ಲಿ ಸಾಕಷ್ಟು ಲೂಟಿ ಹೊಡೆದರು. ಒಂದೊಂದು ಬೆಡ್ ಎಷ್ಟಕ್ಕೆ ಮಾರಿಕೊಂಡಿದ್ದಾರೆಂದು ಗೊತ್ತು. ಪೋಕ್ಸೋ ಪ್ರಕರಣದಲ್ಲಿ ಸರಿಯಾಗಿ ಸರ್ಕಾರ ವಾದ ಮಂಡಿಸಿದರೆ ಬಿಎಸ್ವೈ ಜೈಲಿಗೆ ಹೋಗುತ್ತಾರೆ. ನಾನು ಕೇವಲ ಚನ್ನಮ್ಮ, ರಾಯಣ್ಣ ಬ್ರಿಗೇಡ್ ಕೆಲಸ ಮಾಡುವುದಿಲ್ಲ. ಹಿಂದು ಸಮಾಜದ ಪರವಾಗಿ ಕೆಲಸ ಮಾಡುವೆ. ಅದರಲ್ಲಿ ಚನ್ನಮ್ಮ, ರಾಯಣ್ಣ, ವಾಲ್ಮೀಕಿ, ಅಂಬೇಡ್ಕರ್ ಎಲ್ಲರೂ ಬರುತ್ತಾರೆಂದರು.