ವಿಶ್ವ ಮಹಿಳಾ ದಿನದ ಅಂಗವಾಗಿ ಸಾಧಕ ಮಹಿಳೆಯರಿಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಪ್ರದಾನ

womans day
Published on

ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಹೆಣ್ಣು ಮಾಡಬೇಕು ಎಂದು ಮಹಾರಾಣಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಎಸ್. ಸುಧಾ ಹೇಳಿದರು.

ವಿಶ್ವ ಮಹಿಳಾ ದಿನದ ಅಂಗವಾಗಿ ನಗರದ ಪತ್ರರ್ತರ ಭವನದಲ್ಲಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಸೋಮವಾರ ಆಯೋಜಿಸಿದ್ದ ಸಾಧಕ ಮಹಿಳೆಯರಿಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಹಿಂದೆಲ್ಲಾ ಹೆಣ್ಣಿಗೆ ಹೆಚ್ಚು ಓದಲು ಅವಕಾಶಗಳಾಗುತ್ತಿರಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣು ಮುಂದೆಬರುತ್ತಿರುವುದು ಸಂತಸದ ವಿಚಾರ. ಆದರೂ ನಗರದ ಮಹಿಳೆಯರಂತೆ ಗ್ರಾಮೀಣ ಹೆಣ್ಣು ಮಕ್ಕಳಿಗೂ ಈ ಅವಕಾಶಗಳು ಸಿಕ್ಕಿದೆಯಾ ಎಂಬ ಪ್ರಶ್ನೆ ಕಾಡುತ್ತದೆ. ಹೀಗಾಗಿ ತಾಯಿಯಾದವರು ತನ್ನ ಹೆಣ್ಣು-ಗಂಡು ಮಕ್ಕಳಿಗೆ ಸಮಾನವಾಗಿ ಸಂಸ್ಕಾರವನ್ನು ಕಲಿಸಬೇಕಿದೆ. ರೀಲ್ಸ್ ಮಾಡಿ ಸಮಯ ಕಳೆಯುತ್ತಾ, ಜಂಕ್-ಫುಡ್‌ಗಳನ್ನು ಮನೆಗೆ ತರಿಸಿಕೊಳ್ಳುತ್ತಿರುವುದರಿಂದ ಮಕ್ಕಳು ಸ್ಥೂಲಕಾಯಕ್ಕೆ ಒಳಗಾಗುತ್ತಿದ್ದಾರೆ. ಇದು ಎಲ್ಲ ಕಾಯಿಲೆಗಳಿಗೂ ಮೂಲವಾಗುತ್ತಿದೆ. ಹೀಗಾಗಿ ಹೆಣ್ಣು ತನ್ನ ಆರೋಗ್ಯ ಕಾಪಾಡಿಕೊಂಡರೆ ತನ್ನ ಇಡೀ ಕುಟುಂಬದವರು ಆರೋಗ್ಯವಂತರಾಗಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತೆ ಡಾ.ಎಸ್.ರಮ್ಯಾ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆಗಾಗಿ ಹೋರಾಡುತ್ತಿದ್ದ ಮಹಿಳೆ, ತಂತ್ರಜ್ಞಾನ ಮುಂದುವರಿದಂತೆ ಭವಿಷ್ಯದಲ್ಲಿ ರೋಬೋಟ್‌ಗಳ ಜತೆಗೆ ಸಮಾನತೆಗಾಗಿ ಹೋರಾಡಬೇಕಾದ ಸ್ಥಿತಿ ನರ್ಮಾಣವಾಗಲಿದೆ. ಕೃತಕ ಬುದ್ಧಿಮತ್ತೆ, ರೋಬೋಟ್‌ಗಳು ಎಲ್ಲಾ ಕ್ಷೇತ್ರಗಳಲ್ಲೂ ಬರುತ್ತಿದ್ದರೂ ಮಹಿಳೆ ತೋರುವ ಪ್ರೀತಿ, ವಾತ್ಸಲ್ಯವನ್ನು ಇವು ಕೊಡಲಾರವು. ಹೀಗಾಗಿ ಮಹಿಳೆ ಈ ಗುಣಗಳನ್ನು ಬಿಡಬಾರದು ಎಂದು ಹೇಳಿದರು.

ಇದೇ ವೇಳೆ ರಾಹಯಲ್ ಆಲಗೂರ (ಸಮಾಜ ಸೇವಕ), ಎಸ್ ರಮ್ಯ (ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರು), ಅಂಬಿಕಾ ವೆಂಕಟೇಶ್ (ಸೌಂದರ್ಯ ತಜ್ಞೆ), ಎನ್.ಸರಸ್ವತಿ, (ನಗರ ಘಟಕ ಕಸಾಪ ಅಧ್ಯಕ್ಷೆ, ಶ್ರೀರಂಗಪಟ್ಟಣ), ಪ್ರೇಮ (ಕಲಾವಿದರು), ಆರ್.ಪಾರ್ವತಿ (ಪೌರಕಾರ್ಮಿಕರು), ಪವಿತ್ರರಾಜು (ಪತ್ರಕರ್ತೆ), ನಾಗಜ್ಯೋತಿ ಪ್ರತಿಧ್ವನಿ ಪ್ರಸಾದ್ (ಶುಶ್ರೂಷಕಿ), ಎಂ.ಬಿ.ಗೀತಾ (ಎಎಸ್‌ಐ), ತೇಜಸ್ವೀನಿ (ಗಣಕಯಂತ್ರ ಆಪರೇಟರ್) ಅವರಿಗೆ ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿಯ ಯೋಜನೆಯ ಜಂಟಿ ನಿರ್ದೇಶಕಿ ಎಂ.ಎಸ್.ಪದ್ಮನಿ, ದಂತವೈದ್ಯ ಡಾ.ಲೋಕೇಶ್, ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಡಾ.ಬಾಲಕೃಷ್ಣ, ನಾಲಾಬೀದಿರವಿ, ಪತ್ರಕರ್ತ ಕೆ. ದೀಪಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net