

ಬೆಂಗಳೂರು: ಬೆಂಗಳೂರಿನ ಭೂಗತ ಜಗತ್ತನ್ನು ಆಳಿದ್ದ ಜಯರಾಜ್ ಅನ್ನು ಕೊಲೆ ಮಾಡ ಬಾರದಾಗಿತ್ತು. ಆತ ಒಳ್ಳೆಯ ಪೈಲ್ವಾನ್, ತುಂಬಾ ಕಷ್ಟ ಪಟ್ಟು ಮೇಲೆ ಬಂದಿದ್ದರು.
ಇದು ಭೂಗತ ಜಗತ್ತನ್ನು ಆಳಿದ ಮುತ್ತಪ್ಪ ರೈ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಹ ಕೈದಿ ಜತೆಗೆ ಹಂಚಿಕೊಂಡಿದ್ದ ಮನದಾಳದ ಮಾತು.
2001ರ ಜುಲೈನಲ್ಲಿ ಮುತ್ತಪ್ಪ ರೈನನ್ನು ದುಬೈಯಿಂದ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಊಟ, ಟೀ ಸಮಯದಲ್ಲಿ ಕೆಲ ಕಾಲ ರೈ, ಹಳೆಯ ನೆನಪು ಹಂಚಿಕೊಂಡಿದ್ದರು.
ಜಯರಾಜ್ ಕಡೆಯ ಹುಡುಗರು ಎಂ.ಜಿ.ರಸ್ತೆಯ ಪಬ್ಗೆ ಹೋಗಿ ಗಲಾಟೆ ಮಾಡುತ್ತಿದ್ದರೂ ಎಂಬ ಕಾರಣಕ್ಕೆ ಕೊಲೆಗೆ ಸ್ಕೇಚ್ ನಡೆಯಿತು. ಮುಂಬೈಯಿಂದ ಶಾಪ್೯ ಶೂಟರ್ ಕರೆಸಿ ಜಯರಾಜ್ ಕತೆ ಮುಗಿಸಲಾಯಿತು ಎಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದರು.
ಅಲ್ಲಿಯವರೆಗೂ ರೌಡಿ ಜಮಾನದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆ ನಂತರ ಜಯರಾಜ್ ಒಳ್ಳೆಯ ಪೈಲ್ವಾನ್, ಅವರ ಕೊಲೆ ನಡೆಯಬಾರದಾಗಿತ್ತು ಎಂದು ಮುತ್ತಪ್ಪ ರೈ ತನ್ನ ಮನದಾಳದ ಮಾತನ್ನು ಹಂಚಿಕೊಂಡಿದ್ದರು ಎಂದು ಡಾ.ಸುಭಾಷ್ ಪಾಟೀಲ್ ವಿಜಯವಾಣಿಗೆ ವಿವರಿಸಿದರು.
ಮಾಜಿ ಭೂಗತ ಲೋಕದ ದೊರೆ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68) ಇಂದು ಬೆಳಗ್ಗಿನ ಜಾವ 2 ಗಂಟೆಗೆ ಕೊನೆಯುಸಿರೆಳೆದರು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಬಿಡದಿ ನಿವಾಸದಲ್ಲಿಂದು ಅವರ ಅಂತ್ಯಕ್ರಿಯೆ ನೇರವೇರಲಿದೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: PHOTOS| ಮಾಜಿ ಭೂಗತ ದೊರೆ ಹೀಗಿದ್ರು ನೋಡಿ…