Asaduddin Owaisi | ಅಸ್ಸಾಂ ಬಿಜೆಪಿಯಿಂದ ವಿವಾದಾತ್ಮಕ ಎಐ ವಿಡಿಯೋ ಪೋಸ್ಟ್​​​; ಮುಸ್ಲಿಂ ಮುಕ್ತ ಭಾರತ ಕನಸಿನ ಮಾತು ಎಂದ ಸಂಸದ ಓವೈಸಿ!

Asaduddin Owaisi
Published on

Asaduddin Owaisi: ಭಾರತೀಯ ಜನತಾ ಪಕ್ಷದ ಅಸ್ಸಾಂ ಘಟಕ ತನ್ನ ಅಧಿಕೃತ ಖಾತೆಯಲ್ಲಿ ಸೆಪ್ಟೆಂಬರ್ 15 ರಂದು ಹಂಚಿಕೊಂಡಿರುವ ವಿಡಿಯೋವನ್ನು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ.

ಬುಧವಾರ (ಸೆಪ್ಟೆಂಬರ್ 17) ತಮ್ಮ ಎಕ್ಸ್​​​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಓವೈಸಿ, ಬಿಜೆಪಿ ಅಸ್ಸಾಂ ಅಸಹ್ಯಕರವಾದ ಕೃತಕ ಬುದ್ಧಿಮತ್ತೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಈ ಮೂಲಕ ಮುಸ್ಲಿಂ ಮುಕ್ತ ಭಾರತ ಕಲ್ಪನೆ ಇದ್ದರೆ ಅದು ನಿಮ್ಮ ಕನಸು ಎಂದು ಬರೆದಿದ್ದಾರೆ. ಅದು ಅಸಹ್ಯಕರ ಹಿಂದುತ್ವ ಸಿದ್ಧಾಂತವನ್ನು ಬಹಿರಂಗಪಡಿಸುತ್ತದೆ ಮತ್ತು ಆ ಪಕ್ಷ ಭಾರತದಲ್ಲಿ ಮುಸ್ಲಿಮರ ಅಸ್ತಿತ್ವವನ್ನೇ ಒಂದು ಸಮಸ್ಯೆಯಾಗಿ ನೋಡುತ್ತದೆ ಎಂದಿದ್ದಾರೆ.

ಬಿಜೆಪಿಯ ಹಂಚಿಕೊಂಡಿರುವ ವಿಡಿಯೋ ಕುರಿತು ಸಾಮಾಜಿಕ ಜಾಲತಾಣದ ಬಳಕೆದಾರರಿಂದಲೂ ಕೂಡ ಟೀಕೆಗಳು ವ್ಯಕ್ತವಾಗಿದ್ದು, ಇದು ಕೋಮು ದ್ವೇಷವನ್ನು ಪ್ರಚೋದಿಸುತ್ತಿದೆ ಮತ್ತು "ಇಸ್ಲಾಮೋಫೋಬಿಯಾ" ಎಂದು ಆರೋಪಿಸಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷೆ ಸುಪ್ರಿಯಾ ಶ್ರೀನಾಟೆ, ಚುನಾವಣಾ ಆಯೋಗ ಈ ರೀತಿಯ ಪೋಸ್ಟ್‌ಗಳಿಗೆ ಯಾವುದೇ ಆಕ್ಷೇಪಣೆಗಳಿಲ್ಲವೇ..? ಬಿಜೆಪಿ ಈ ರೀತಿಯಾಗಿ ವಿಷ ಹರಡುತ್ತಿದ್ದರು ಆಯೋಗ ಮೌನವಾಗಿರುವುದನ್ನು ಪ್ರಶ್ನಿಸಿದ್ದರು.

ವಿಡಿಯೋದಲ್ಲಿರುವುದೇನು..?

ಕೃತಕ ಬುದ್ಧಿಮತ್ತೆ ಆಧಾರಿತ ಈ ಕ್ಲಿಪ್, ಮುಸ್ಲಿಂ ಬಹುಸಂಖ್ಯಾತ ಅಸ್ಸಾಂ ಅನ್ನು ಕಾಲ್ಪನಿಕವಾಗಿ ಚಿತ್ರಿಸುತ್ತದೆ ಮತ್ತು ಮುಸ್ಲಿಮರನ್ನು ಭೂಕಬಳಿಕೆ ಮಾಡುವ ಅಕ್ರಮ ವಲಸಿಗರಂತೆ ಬಿಂಬಿಸಿದೆ. ಬಿಜೆಪಿ ಅಧಿಕಾರದಲ್ಲಿರದಿದ್ದರೆ ಹೇಗಿರುತ್ತದೆ, ಗೋಮಾಂಸವನ್ನು ಕಾನೂನುಬದ್ಧಗೊಳಿಸಲಾಗುತ್ತಿದೆ ಮತ್ತು ಪಾಕಿಸ್ತಾನಿ ಪ್ರಭಾವವಿದೆ ಎಂದು ಆರೋಪಿಸಲಾಗುತ್ತಿದೆ. ಈ ವಿಡಿಯೋದಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಗೌರವ್ ಗೊಗೊಯ್ ಅವರು ಪಾಕಿಸ್ತಾನಿ ಧ್ವಜದ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕೂಡ ಇದೆ.

ಈ ವಿವಾದದ ಬಗ್ಗೆ ಅಸ್ಸಾಂ ಬಿಜೆಪಿಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಿಡುಗಡೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net