ಪೊಲೀಸ್​ ಮೇಲೆ ವಕೀಲರ ಹಲ್ಲೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ| Varanasi

untitled-design-2025-09-17t124956538-68ca6126244e5
Published on

Varanasi : ವಾರಣಾಸಿಯ ಜಿಲ್ಲಾ ಸಂಕೀರ್ಣದೊಳಗೆ ವಕೀಲರ ಗುಂಪೊಂದು ಹಲ್ಲೆ ನಡೆಸಿದ್ದರಿಂದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಮತ್ತು ನ್ಯಾಯಾಲಯದ ಗುಮಾಸ್ತರೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ (ಸೆಪ್ಟೆಂಬರ್​ 16) ಬೆಳಕಿಗೆ ಬಂದಿದೆ.

ಈ ವಿಚಾರವು ಪೊಲೀಸ್​ ಇಲಾಖೆಯೊಳಗೆ ತೀವ್ರ ಚರ್ಚೆಗೀಡಾಗಿದ್ದು, ಗಾಯಗೊಂಡ ಪೊಲೀಸರು ಮತ್ತು ವಕೀಲರ ನಡುವಿನ ಹಳೆಯ ವಾಗ್ವಾದದ ದ್ವೇಷದಿಂದ ಈ ಕೃತ್ಯ ನಡೆದಿದೆ ಎಂದು ವರದಿಯಾಗಿದೆ.

ಬರಗಾಂವ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಬ್-ಇನ್ಸ್‌ಪೆಕ್ಟರ್ ಮಿಥಿಲೇಶ್ ಪ್ರಜಾಪತಿ ಅವರು ಗೋ ಸಂರಕ್ಷಣಾ ಕಾಯ್ದೆಯಡಿ ರಿಮ್ಯಾಂಡ್ ಪತ್ರವನ್ನು ಪಡೆಯಲು ಕಾನ್‌ಸ್ಟೇಬಲ್ ಜೊತೆ ವಾರಣಾಸಿ ನ್ಯಾಯಾಲಯಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ವಕೀಲರ ಗುಂಪು ಅವರನ್ನು ಗುರುತಿಸಿ ಹಲ್ಲೆ ನಡೆಸಿದ್ದಾರೆ.

ಈ ಗಲಭೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಠಾಣೆಯ ನ್ಯಾಯಾಲಯದ ಗುಮಾಸ್ತ ರಾಣಾ ಪ್ರತಾಪ್ (28) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ

ಘಟನೆಯ ಬಗ್ಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಶಿವಹರಿ ಮೀನಾ ಮಾತನಾಡಿದ್ದು, ನ್ಯಾಯಾಲಯದ ಸುತ್ತಲೂ ಭಿಗಿ ಬಂದೋಬಸ್ತ್​​ ಮಾಡಲಾಗಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಈ ವಿಚಾರದ ಬಗ್ಗೆ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿ ಮೂಲಗಳಿಗೆ ತಿಳಿಸಿದರು.

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ, ಸ್ಥಳೀಯ ಬಾರ್ ಅಸೋಸಿಯೇಷನ್ ​​ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸಾಕ್ಷ್ಯಗಳ ಆಧಾರದ ಮೇಲೆ ಮುಂದುವರೆಯಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net