ಸಾಮೂಹಿಕ ನಮಾಜ್​ ಮಾಡಬೇಡಿ ಎಂದ ಪೊಲೀಸರ ಮೇಲೆ ಕಲ್ಲು ತೂರಾಟ- ಶಾಸಕನಿಂದಲೇ ನಿಯಮ ಉಲ್ಲಂಘನೆ!

namazweb
Published on

ಬೊಕಾರೊ (ಜಾರ್ಖಂಡ್​), ಬಹರೈಚ್ (ಉತ್ತರ ಪ್ರದೇಶ) : ಲಾಕ್​ಡೌನ್​ ಹಿನ್ನೆಲೆಯಲ್ಲಿ, ಎಲ್ಲಾ ದೇವಾಲಯಗಳು, ಧಾರ್ಮಿಕ ಕ್ಷೇತ್ರಗಳನ್ನು ಮುಚ್ಚಲಾಗಿದೆ. ಇವುಗಳನ್ನು ತೆರೆದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ, ಇದರಿಂದ ಕರೊನಾ ವೈರಸ್​ ಶೀಘ್ರದಲ್ಲಿ ಹರಡುತ್ತದೆ ಎನ್ನುವ ಕಾರಣಕ್ಕೆ, ಸರ್ಕಾರಗಳು ಈ ಕ್ರಮವನ್ನು ತೆಗೆದುಕೊಂಡಿದೆ.

ಆದರೆ ಸರ್ಕಾರಗಳು, ಪೊಲೀಸರು ಎಷ್ಟೇ ಸಾರಿ ಸಾರಿ ಹೇಳಿದರೂ, ಕೆಲವರು ಇದನ್ನು ಕಿವಿಯ ಮೆಲೆ ಹಾಕಿಕೊಳ್ಳುತ್ತಲೇ ಇಲ್ಲ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ಜಾರ್ಖಂಡ್​ನ ಬೊಕಾರೊ ಹಾಗೂ ಉತ್ತರ ಪ್ರದೇಶದ ಬಹರೈಚ್​ನಲ್ಲಿ ಜನರಿಗೆ ತಿಳಿ ಹೇಳಲು ಹೋದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆದಿದೆ, ಇದರಲ್ಲಿ ಪೊಲೀಸರಿಗೆ ಗಂಭೀರ ಗಾಯಗಳಾಗಿವೆ.

ಬೊಕಾರೊದ ಮಸೀದಿಯೊಂದರಲ್ಲಿ ಸಾಮೂಹಿಕವಾಗಿ ನಮಾಜ್​ ಮಾಡುತ್ತಿದ್ದವರಿಗೆ ಬುದ್ಧಿ ಹೇಳಲು ಹೋದ ಪೊಲೀಸರ ಮೇಲೆ ಕಲ್ಲನ್ನು ಎಸೆಯಲಾಗಿದೆ ಎಂದು ವರದಿಯಾಗಿದೆ. ಯಾವುದೇ ರೀತಿಯ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಸಾಮೂಹಿಕ ನಮಾಜ್​ನಲ್ಲಿ ಇವರು ತೊಡಗಲಾಗಿತ್ತು. ಪೊಲೀಸರು ಹೀಗೆ ಮಾಡದಂತೆ ಹೇಳಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜಾರ್ಖಂಡ್‌ನ ಬೊಕಾರೊ ಜಿಲ್ಲೆಯ ಪಿಂಡ್ರಾಜೋರಾ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರದಲ್ಲಿ 200 ಕ್ಕೂ ಹೆಚ್ಚು ಜನರು ಮಸೀದಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕೆಲವು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ. ಮಾಡಿದ್ದೂ ಅಲ್ಲದೆ, ಉದ್ರಿಕ್ತರ ಗುಂಪು ಪೊಲೀಸ್​ ವ್ಯಾನ್​ನ ಗಾಜು ಪುಡಿಪುಡಿ ಮಾಡಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳ ವಿರುದ್ಧ ಕೇಸು ದಾಖಲು ಮಾಡಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಉತ್ತರ ಪ್ರದೇಶದ ಬಹರೈಚ್​ನಲ್ಲಿ ನಮಾಜ್​ ಮಾಡಬೇಡಿ ಎಂದ ಪೊಲೀಸರ ಮೇಲೆ ಉದ್ರಿಕ್ತ ಗುಂಪು ಹಲ್ಲೆ ಮಾಡಿರುವ ವರದಿಯಾಗಿದೆ. ಇಲ್ಲಿಯೂ ಕಲ್ಲು ತೂರಾಟ ನಡೆದಿದ್ದು, ಇಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ರಾಮ್​ ಪ್ರವೇಶ್​ ಮತ್ತು ವಿನಯ್​ ಕುಮಾರ್​ ಎಂಬ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಅದೇ ರೀತಿ ಸಮಾಜವಾದಿ ಪಕ್ಷದ ಶಾಸಕ ಹಾಜಿ ಇಕ್ರಮ್​ ಖುರೇಷಿ ಲಾಕ್​ಡೌನ್​ ನಿಯಮ ಉಲ್ಲಂಘಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮೊರಾದಾಬಾದ್​ನಲ್ಲಿ ಆಹಾರ ವಿತರಣೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. "ಈ ಸಂದರ್ಭದಲ್ಲಿ ನಾವು ಪ್ರತಿವರ್ಷವೂ ಆಹಾರ ವಿತರಣೆ ಮಾಡುತ್ತೇವೆ. ಜನ ಸೇರಿದರೆ ನಾವೇನು ಮಾಡಲು ಆಗುತ್ತದೆ' ಎಂಬ ಬೇಜವಾಬ್ದಾರಿಯ ಉತ್ತರವನ್ನು ನೀಡಿದ್ದಾರೆ. ಈ ಕುರಿತು ಎಎನ್​ಐ ಸುದ್ದಿ ಸಂಸ್ಥೆ ಟ್ವಟರ್​ನಲ್ಲಿ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net