

ಪಟನಾ: ಬಿಹಾರ ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಎನ್ಡಿಎ ಸರ್ಕಾರ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿದ್ದು, ಸಚಿವ ಸಂಪುಟವನ್ನೂ ರಚಿಸಿದೆ. ರಾಜ್ಯದಲ್ಲಿ ಸೋಮವಾರ ಮತ್ತು ಮಂಗಳವಾರ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ನಡೆಯುತ್ತಿದೆ. ಈ ಸಮಯದಲ್ಲಿ ಮುಸ್ಲಿಂ ಶಾಸಕರೊಬ್ಬರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಎಲ್ಲರ ಹುಬ್ಬೇರುವಂತಾಗಿದೆ.
ಕಾಂಗ್ರೆಸ್ ಶಾಸಕ ಶಕೀಲ್ ಅಹಮ್ಮದ್ ಖಾನ್ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕ. ಇವರು ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಕೂಡ ಹೌದು. ಸಂಸ್ಕೃತವನ್ನು ತಮ್ಮ ಭಾಷೆ ಎಂದುಕೊಂಡಿರುವ ಬಿಜೆಪಿ, ಹಾಗೂ ಅದೊಂದು ಪರ ಭಾಷೆ ಎಂದು ದೂರುವ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಎಂಐಎಂ) ಪಕ್ಷಕ್ಕೆ ಒಂದು ಖಡಕ್ ಉತ್ತರ ಕೊಡುವ ಸಲುವಾಗಿ ತಾವು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ವಿವಿಧತೆಯಲ್ಲಿ ಏಕತೆ ಸಾರುವಂತಿತ್ತು. ಮೈಥಿಲಿ, ಉರ್ದು, ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. (ಏಜೆನ್ಸೀಸ್)