

ಯಮುನಾನಗರ: ದೇಶಾದ್ಯಂತ ಲವ್ ಜಿಹಾದ್ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿರುವಾಗಲೇ, ಮತಾಂತರಗೊಂಡು ಮದುವೆಯಾದ ಜೋಡಿಯೊಂದಕ್ಕೆ ಪೊಲೀಸ್ ರಕ್ಷಣೆ ನೀಡಿ ಪಂಜಾಬ್-ಹರಿಯಾಣ ಹೈ ಕೋರ್ಟ್ ಆದೇಶಿಸಿದೆ.
ಹರಿಯಾಣದ 21 ವರ್ಷದ ಮುಸ್ಲಿಂ ಯುವಕನೋರ್ವ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, 19 ವರ್ಷದ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ. ಹಿಂದೂ ಸಂಪ್ರದಾಯದಂತೆ ಮದುವೆಯಾದ ಜೋಡಿಯ ಮೇಲೆ ವಧುವಿನ ಕುಟುಂಬಸ್ಥರು ಹಲ್ಲೆ ನಡೆಸಲು ಪ್ರಯತ್ನಿಸುತ್ತಿದ್ದಾರಂತೆ. ಅದೇ ಹಿನ್ನೆಲೆಯಲ್ಲಿ ದಂಪತಿ ಹೈ ಕೋರ್ಟ್ ಮೆಟ್ಟಿಲೇರಿದ್ದ. ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ದಂಪತಿಯ ಕೋರಿಕೆಗೆ ಹೈ ಕೋರ್ಟ್ ಒಪ್ಪಿದ್ದು, ಪೊಲೀಸ್ ರಕ್ಷಣೆ ನೀಡಿದೆ.
ಉತ್ತರ ಪ್ರದೇಶದ ನಂತರ ಹರಿಯಾಣದಲ್ಲಿಯೂ ಲವ್ ಜಿಹಾದ್ ಕಾಯ್ದೆ ತರಲು ಸಿದ್ಧತೆ ನಡೆಸಲಾಗುತ್ತಿದೆ. ಮಸೂದೆಯ ಡ್ರಾಫ್ಟ್ ಸಿದ್ಧಪಡಿಸಲು ಮೂರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಯಾರು ಯಾರನ್ನಾದರೂ ಮದುವೆಯಾಗಬಹುದು. ಆದರೆ ಕೆಟ್ಟ ಉದ್ದೇಶವನ್ನಿಟ್ಟುಕೊಂಡು, ಬೇರೆ ಧರ್ಮದವರನ್ನು ಮೋಸದಿಂದ ಮದುವೆಯಾಗಿ ಹಿಂಸಿಸುವವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿದೆ. (ಏಜೆನ್ಸೀಸ್)