800 ರೂ.ಗೆ 2 ಚಾಕು, ನಿದ್ರೆ ಮಾತ್ರೆ! ಪತಿಯ...: ಕಡೆಗೂ ಸೌರಭ್​ ಭೀಕರ ಹತ್ಯೆಯ ಕರಾಳತೆ ಬಿಚ್ಚಿಟ್ಟ ಮುಸ್ಕಾನ್​ | Murder Case

ವಿಜಯವಾಣಿ (80)
Published on

Murder Case: ಪ್ರಿಯಕರನ ಜತೆ ಪ್ರೇಮ ಸಲ್ಲಾಪ ನಡೆಸಲು ಅಡ್ಡಿಯಾಗಿದ್ದ ಪತಿಯನ್ನು ಭೀಕರವಾಗಿ ಹತ್ಯೆಗೈದ ಪಾಪಿ ಪತ್ನಿ ಮತ್ತು ಆಕೆಯ ಪ್ರಿಯಕರ, ಸೌರಭ್​ ರಜಪುತ್​ನನ್ನು 15 ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಡ್ರಮ್​ನಲ್ಲಿರಿಸಿ, ಅದನ್ನು ಸಿಮೆಂಟ್​ನಿಂದ ಮುಚ್ಚಿಟ್ಟ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ಕೊಲೆ ಆರೋಪಿಗಳಾದ ಸೌರಭ್ ಪತ್ನಿ ಮುಸ್ಕಾನ್​ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್​ ಸದ್ಯ ಜೈಲು ಕಂಬಿ ಎಣಿಸುತ್ತಿದ್ದಾರೆ. ಇಬ್ಬರನ್ನೂ ಪ್ರತ್ಯೇಕ ಸೆಲ್​ಗಳಲ್ಲಿ ಇರಿಸಿರುವ ಪೊಲೀಸ್ ಅಧಿಕಾರಿಗಳು, ಒಬ್ಬರ ಮುಖ ಇನ್ನೊಬ್ಬರು ನೋಡದಂತೆ, ಮಾತನಾಡಿಸದಂತೆ ಕೊಲೆಗೈದ ಪ್ರೇಮಿಗಳ ರೆಕ್ಕೆಯನ್ನು ಕತ್ತರಿಸಿ ಮೂಲೆಯಲ್ಲಿ ಕೂರಿಸಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು ಕಡೆಗೂ ಆರೋಪಿಗಳಿಂದ ಸತ್ಯವನ್ನು ಬಾಯ್ಬಿಡಿಸಿದ್ದಾರೆ.

ತನಿಖೆಯಲ್ಲಿ ಅಧಿಕಾರಿಗಳ ಮುಂದೆ ಕೊಲೆಯ ಭೀಕರತೆ ವಿವರಿಸಿದ ಮುಸ್ಕಾನ್​, "ಪತಿ ಲಂಡನ್​ನಿಂದ ವಾಪಾಸ್​ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾದ ತಕ್ಷಣವೇ ಅವರ ಹತ್ಯೆಗೆ ನಾವಿಬ್ಬರು ಸಂಚು ಹೂಡಿದೆವು. 800 ರೂ.ಗೆ ಎರಡು ಹರಿತವಾದ ಚಾಕು ಖರೀದಿಸಿದ್ದೆವು. 8 ದಿನಗಳ ಕಾಲ ಚಾಕುವಿನಿಂದ ಚುಚ್ಚುವುದು ಹೇಗೆಂದು ತರಬೇತಿ ಮಾಡಿದೆವು. ಇದರ ಜತೆಗೆ ರೇಜರ್​ ಬ್ಲೇಡ್​ ಅನ್ನು ತಲೆಯನ್ನು ದೇಹದಿಂದ ಬೇರ್ಪಡಿಸಲು ತಂದಿದ್ದೆ" ಎಂದಿದ್ದಾಳೆ.

"ಮಾ.04ರಂದು ಸೌರಭ್ ಮನೆಗೆ ಬಂದಾಗ ಊಟದಲ್ಲಿ ನಿದ್ರೆ ಮಾತ್ರ ಬೆರೆಸಿ ಕೊಟ್ಟೆ. ಕೆಲವು ಸಮಯದ ಬಳಿಕ ಅವರು ನಿದ್ರೆಗೆ ಜಾರಿದರು. ನಾವು ಹಾಕಿಕೊಂಡ ಸಂಚಿನಂತೆ ಚಾಕುವಿನಿಂದ ಮೂರು ಬಾರಿ ಇರಿದೆವು. ಆ ನಂತರ ರೇಜರ್​ ಬ್ಲೇಡ್​ನಿಂದ ಪತಿಯ ಕತ್ತನ್ನು ಸೀಳಿದೆ. ಸಾಹಿಲ್​ ಕುತ್ತಿಗೆಯನ್ನು ದೇಹದಿಂದ ಬೇರ್ಪಡಿಸಿದ. ಇಬ್ಬರೂ ಸೇರಿ ದೇಹವನ್ನು 15 ತುಂಡು ಮಾಡಿ, ಡ್ರಮ್​ನಲ್ಲಿರಿಸಿ, ಸಿಮೆಂಟ್​ನಿಂದ ಮುಚ್ಚಿದೆವು" ಎಂದು ಹೇಳಿದ್ದಾಳೆ,(ಏಜೆನ್ಸೀಸ್).

ಏನಿದು ಪ್ರಕರಣ?

ಉತ್ತರಪ್ರದೇಶ​ ಮೀರತ್‌ನ ಸೌರಭ್ ರಜಪೂತ್ ದೇಹ ಡ್ರಮ್​ನಲ್ಲಿದೆ ಎಂಬುದನ್ನು ಪತ್ತೆಹಚ್ಚಿದ್ದೇ ಅವರ ಆರು ವರ್ಷದ ಮಗಳು. ತಾಯಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಕೊಲೆಗೈದು ತಂದೆಯನ್ನು ಡ್ರಮ್​ನಲ್ಲಿ ಸಿಮೆಂಟ್​ನಿಂದ ಮುಚ್ಚಿರುವುದನ್ನು ಸೌರಭ್ ಪುತ್ರಿ ಕಣ್ಣಾರೆ ನೋಡಿದ್ದಳು. ಈ ವೇಳೆ ಮನೆಯಲ್ಲಿ ಸೌರಭ್ ಕಾಣುತ್ತಿಲ್ಲ ಎಂದು ಅವರ ತಾಯಿ ಗೋಳಾಡಿದ್ದಾರೆ. ಮಗ ನಾಪತ್ತೆಯಾಗಿದ್ದಾನೆ ಆತನನ್ನು ಹುಡುಕಿಕೊಡಿ ಎಂದು ತಾಯಿ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದೇ ತಡ ಮೃತ ಸೌರಭ್ ಪುತ್ರಿ, ಅಪ್ಪ ಡ್ರಮ್​ನಲ್ಲಿ ಇದ್ದಾರೆ ಎಂದು ಸುಳಿವು ನೀಡಿದ್ದಳು. ಆದರೆ, ಆ ಕ್ಷಣಕ್ಕೆ ಇದು ಉಪಯೋಗವಾಗಲಿಲ್ಲ. ಕಾರಣ, ಬಾಲಕಿ ತಮಾಷೆ ಮಾಡುತ್ತಿದ್ದಾಳೆ ಎಂದು ಮನೆಯವರು ಅಂದುಕೊಂಡಿದ್ದರು. ಅಂತಿಮವಾಗಿ ಡ್ರಮ್​ನಲ್ಲಿದ್ದ ಸಿಮೆಂಟ್​ ಅನ್ನು ಹೊಡೆದಾಗ ಸೌರಭ್ ಮೃತದೇಹ ಪತ್ತೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net