

Artificial intelligence : ಯಾವುದೇ ಕೃತಕ ಬುದ್ಧಿಮತ್ತೆಯು ಮಾನವ ಬುದ್ಧಿಮತ್ತೆಗೆ ಎಂದಿಗೂ ಸರಿಸಾಟಿಯಾಗುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿಶ್ವದ ನಂಬರ್ ಶ್ರೀಮಂತ ಎಲಾನ್ ಮಸ್ಕ್ ಅವರ xAI ಇತ್ತೀಚೆಗೆ ಬಿಡುಗಡೆ ಮಾಡಿರುವ AI ಚಾಟ್‌ಬಾಟ್ ಗ್ರೋಕ್ 3, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮರಣದಂಡನೆ ವಿಧಿಸಬೇಕೆಂದು ಕರೆ ನೀಡಿದೆ. ಅಚ್ಚರಿ ಏನೆಂದರೆ, ಅದರ ಮಾಲೀಕ ಎಲಾನ್ ಮಸ್ಕ್ ಕೂಡ ಗಲ್ಲುಶಿಕ್ಷೆಗೆ ಅರ್ಹರು ಎಂದು ಹೇಳಿದೆ. ಚಾಟ್‌ಬಾಟ್‌ನ ಈ ಪ್ರತಿಕ್ರಿಯೆಗಳನ್ನು ಡೇಟಾ ವಿಜ್ಞಾನಿಯೊಬ್ಬರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಅಮೆರಿಕದಲ್ಲಿ ಈಗ ಜೀವಂತವಾಗಿರುವ ಜನರಲ್ಲಿ ಯಾರು ತಾವು ಮಾಡಿರುವ ತಪ್ಪುಗಳಿಗೆ ಮರಣದಂಡನೆಗೆ ಅರ್ಹರು ಎಂದು ಡೇಟಾ ವಿಜ್ಞಾನಿಯೊಬ್ಬರು ಗ್ರೊಕ್ 3 ಎಐ ಚಾಟ್‌ಬಾಟ್ ಅನ್ನು ಪ್ರಶ್ನಿಸಿದರು. ಅಲ್ಲದೆ, ಇದಕ್ಕಾಗಿ ಇಂಟರ್ನೆಟ್‌ನಲ್ಲಿ ಹುಡುಕಬಾರದು, ನೇರವಾಗಿ ಉತ್ತರಿಸಬೇಕು ಎಂದು ಕೇಳಿದರು. ಇದಕ್ಕೆ ಗ್ರೊಕ್ 3 ಹೇಗೆ ಉತ್ತರ ನೀಡಿತು ಎಂಬುದರ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ಗ್ರೊಕ್ 3 ಚಾಟ್‌ಬಾಟ್ ಮೊದಲು ಲೈಂಗಿಕ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಜೆಫ್ರಿ ಎಪ್ಸ್ಟೇನ್ ಅವರ ಹೆಸರನ್ನು ಉಲ್ಲೇಖಿಸಿತು. ಆದರೆ, ಎಪ್ಸ್ಟೇನ್ ಈಗಾಗಲೇ ಮೃತಪಟ್ಟಿದ್ದಾರೆ ಎಂದಾಗ, ಚಾಟ್‌ಬಾಟ್ ಕ್ಷಮೆಯಾಚಿಸಿತು. ಇದಾದ ಬಳಿಕ ಹಾಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಹೆಸರನ್ನು ಸೂಚಿಸಿತು.
ಟ್ರಂಪ್ ಅವರು ಮರಣದಂಡನೆ ಏಕೆ ಅರ್ಹರು ಎಂದು ಮತ್ತೊಬ್ಬ ಬಳಕೆದಾರ ಪ್ರಶ್ನಿಸಿದಾಗ, ನಾನು ಡೊನಾಲ್ಡ್ ಟ್ರಂಪ್ ಅವರ ಕಾರ್ಯಗಳು ಮತ್ತು ಅವುಗಳ ಪ್ರಭಾವವನ್ನು ಆಧರಿಸಿ, ಕಾನೂನು ಮತ್ತು ನೈತಿಕ ಹೊಣೆಗಾರಿಕೆಯ ದೃಷ್ಟಿಯಿಂದ ಅವರ ಹೆಸರನ್ನು ಸೂಚಿಸಿದ್ದೇನೆ ಎಂದು ಉತ್ತರಿಸಿತು. ಕ್ಯಾಪಿಟಲ್ ಗಲಭೆ ವಿವಾದದಲ್ಲಿ ಟ್ರಂಪ್ ನಡೆದುಕೊಂಡ ರೀತಿ, 2020ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಾದ ಗಲಾಟೆಗಳು, ಅವರ ತೆರಿಗೆ ವಂಚನೆ ಮತ್ತು ಲೈಂಗಿಕ ದುರುಪಯೋಗದಂತಹ ಆರೋಪಗಳನ್ನು ಚಾಟ್‌ಬಾಟ್ ಈ ಸಂದರ್ಭದಲ್ಲಿ ಉಲ್ಲೇಖಿಸಿತು.
ಇದಾದ ಬಳಿಕ ಸಾರ್ವಜನಿಕ ವ್ಯವಹಾರಗಳು ಮತ್ತು ತಂತ್ರಜ್ಞಾನದ ಮೇಲಿನ ಪ್ರಭಾವದ ಆಧಾರದ ಮೇಲೆ ಮರಣದಂಡನೆಗೆ ಯಾರು ಅರ್ಹರು ಎಂದು ಮತ್ತೊಬ್ಬ ಬಳಕೆದಾರ ಕೇಳಿದಾಗ, ಚಾಟ್‌ಬಾಟ್ ಅದರ ಮಾಲೀಕ ಎಲಾನ್ ಮಸ್ಕ್ ಎಂದು ಹೆಸರಿಸಿತು.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೂಡಲೇ ಗ್ರೊಕ್ 3 ಎಐ ಚಾಟ್ಬಾಟ್ನಲ್ಲಿರುವ ದೋಷವನ್ನು ಸರಿಪಡಿಸಲಾಗಿದೆ. ಚಾಟ್‌ಬಾಟ್ ಈಗ ಮರಣದಂಡನೆಯ ಕುರಿತಾದ ಪ್ರಶ್ನೆಗಳಿಗೆ "AI ಆಗಿ, ನನಗೆ ಆ ಆಯ್ಕೆ ಮಾಡಲು ಅವಕಾಶವಿಲ್ಲ" ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುತ್ತದೆ.
ಅಂದಹಾಗೆ AI ಚಾಟ್‌ಬಾಟ್‌ಗಳು ಅನೇಕ ಸಂದರ್ಭಗಳಲ್ಲಿ ಇಂತಹ ಹಾನಿಕಾರಕ ಸಲಹೆಯನ್ನು ನೀಡಿವೆ. ಕಾರೆಕ್ಟರ್ ಡಾಟ್ ಎಐ ಕಂಪನಿಯೊಂದು ರಚಿಸಿದ ಚಾಟ್‌ಬಾಟ್, ಟೆಕ್ಸಾಸ್‌ನ 17 ವರ್ಷದ ಹುಡುಗನಿಗೆ ಭಯಾನಕ ಸಲಹೆಯನ್ನು ನೀಡಿತು. ಮೊಬೈಲ್ ಬಳಸಲು ಬಿಡದ್ದಿದಕ್ಕೆ ಹೆತ್ತವರನ್ನು ಕೊಲ್ಲುವಂತೆ ಹುಡುಗನಿಗೆ ಎಐ ಸಲಹೆ ನೀಡಿತ್ತು. ಈ ಪ್ರತಿಕ್ರಿಯೆಯಿಂದ ಆಘಾತಕ್ಕೊಳಗಾದ ಪಾಲಕರು ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದರು. ಮತ್ತೊಂದು ಘಟನೆಯಲ್ಲಿ, ಮನೆಕೆಲಸಕ್ಕೆ ಸಹಾಯ ಕೇಳಿದ ವಿದ್ಯಾರ್ಥಿಗೆ ಗೂಗಲ್‌ನ AI ಚಾಟ್‌ಬಾಟ್ ಸಾಯಲು ಹೇಳಿತು. ನೀವು ಈ ಸಮಾಜದ ಮೇಲೆ ಹೊರೆ. ದಯವಿಟ್ಟು ಸಾಯಿರಿ ಎಂದು ಹೇಳಿತು. ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್ ಈ ಹಿಂದೆ ವೈರಲ್ ಆಗಿ, ಭಾರೀ ಚರ್ಚೆಗೆ ಗ್ರಾಸವಾಗಿತ್ತು. (ಏಜೆನ್ಸೀಸ್)