

ಶೃಂಗೇರಿ: ಶಾರದಾ ಪೀಠದ ಶ್ರೀ ಚಂದ್ರಶೇಖರ ಭಾರತಿ ಸಭಾಂಗಣದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರ ಸ್ವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ಜಗದ್ಗುರು ನಾದಾಭಿವಂದನಂ ಸಂಗೀತ ಕಾರ್ಯಕ್ರಮ ನಡೆಯಿತು.
ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ದಕ್ಷಿಣ ಭಾರತದ ಐವತ್ತು ಪ್ರಸಿದ್ಧ ಸಂಗೀತಗಾರರು ಭಾಗವಹಿಸಿ ಸಂಗೀತ ಸೇವೆ ಸಲ್ಲಿಸಿದರು.
ವಿದ್ವಾನ್ ಎಸ್.ಎಂ.ನಾಗಚೇತನ್ ಅವರ ಪರಿಕಲ್ಪನೆಯಲ್ಲಿ ವಿದ್ವಾನ್ ಆರ್. ರಾಮಕುಮಾರ್, ವಿದ್ವಾನ್ ಆರ್.ಎನ್.ತ್ಯಾಗರಾಜನ್ ಹಾಗೂ ವಿದುಷಿ ಅಮೃತಾ ಮುರಳಿ ಅವರ ನಿರ್ದೇಶನದಲ್ಲಿ ಮೂಡಿದ ಕಾರ್ಯಕ್ರಮದಲ್ಲಿ ಶ್ರೀ ಶಂಕರಭಗವತ್ಪಾದರ ಹಾಗೂ ಶ್ರೀ ಮಲಹಾನಿಕರೇಶ್ವರ ಸ್ತೋತ್ರಗಳು, ಶ್ರೀ ಶಾರದಾ, ಶ್ರೀ ತೋರಣ ಗಣಪತಿ, ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಹಾಗೂ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ರಚಿಸಿದ ಸ್ತೋತ್ರಗಳನ್ನು ನಾಡಿನ ಪ್ರಖ್ಯಾತ ಕಲಾವಿದರು ಹಾಡಿದರು. ಸುಪ್ರೀಂಕೋರ್ಟ್ ನ್ಯಾಯಾಧೀಶ ಅರವಿಂದ್ ಕುಮಾರ್, ಆಡಳಿತಾಧಿಕಾರಿ ಪಿ.ಎ.ಮುರಳಿ ಇದ್ದರು.