ಸಂಸ್ಕಾರಕ್ಕೆ ಸಂಗೀತ ಕಲಿಕೆ ಪೂರಕ

sgr music
ಸಾಗರದಲ್ಲಿ ಸ್ವರಸಿರಿ ಹಿಂದುಸ್ತಾನಿ ಸಂಗೀತ ವಿದ್ಯಾಲಯದಿಂದ ಆಯೋಜಿಸಿದ್ದ ಸ್ವರಸಂಗಮ ಕಾರ್ಯಕ್ರಮವನ್ನು ಪಂಡಿತ್ ಮೋಹನ ಹೆಗಡೆ ಉದ್ಘಾಟಿಸಿದರು. ಡಾ. ವಿಜಯಲಕ್ಷ್ಮೀ ಹೆಗಡೆ, ಕುಸುಮಾ ಹೆಗಡೆ, ಅಶೋಕ್ ಇತರರಿದ್ದರು.
Published on

ಸಾಗರ: ಸಂಗೀತ ಕಲಿಕೆ ಮನಸ್ಸಿನ ದುಗುಡ ದೂರ ಮಾಡಲು ಉತ್ತಮ ಸಾಧನ. ಮನುಷ್ಯ ಸಂಗೀತ ಕಲೆಯಲ್ಲಿ ತೊಡಗಿಕೊಳ್ಳುವ ಮೂಲಕ ಸಂಸ್ಕಾರವಂತನಾಗುತ್ತಾನೆ ಎಂದು ಹಿರಿಯ ಪಂಡಿತ್ ಮೋಹನ ಹೆಗಡೆ ಹುಣಸೆಕೊಪ್ಪ ಹೇಳಿದರು.

ಸಾಗರದ ಅಜಿತ ಸಭಾಭವನದಲ್ಲಿ ಭಾನುವಾರ ಸ್ವರಸಿರಿ ಹಿಂದುಸ್ತಾನಿ ಸಂಗೀತ ವಿದ್ಯಾಲಯದಿಂದ ಏರ್ಪಡಿಸಿದ್ದ ನಾಲ್ಕನೇ ವರ್ಷದ ಸ್ವರಸಂಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಗೀತ ಕಲಿತವರೆಲ್ಲ ಸಂಗೀತಗಾರರಾಗುವುದಿಲ್ಲ. ಸಂಗೀತ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಂಡು ಅವರನ್ನು ಸಂಗೀತ ಲೋಕದಲ್ಲಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಆದರೆ ಸಂಗೀತ ಕಲಿಕೆ ಮತ್ತು ಆಲಿಸುವಿಕೆ ಮನಸ್ಸಿನ ದುಃಖ-ದುಮ್ಮಾನಗಳನ್ನು ದೂರ ಮಾಡುತ್ತದೆ ಎಂದರು.

ಸಂಗೀತ ಶಾಲೆಗೆ ಹೋದ ನೂರಾರು ವಿದ್ಯಾರ್ಥಿಗಳಲ್ಲಿ ಕೇವಲ ನಾಲ್ಕಾರು ವಿದ್ಯಾರ್ಥಿಗಳು ಕಲಾವಿದರಾಗಬಹುದು. ಸಂಗೀತದಿಂದ ಅನೇಕ ಬದಲಾವಣೆ ನಡೆದಿರುವುದು ನನ್ನ ಸಂಗೀತಪಥದಲ್ಲಿ ಗಮನಿಸಿದ್ದೇನೆ. ಸಂಗೀತ ಕಲಿಯಲು ಹೋದ ಮಗು ದೊಡ್ಡ ವೇದಿಕೆಯಲ್ಲಿ ಕಾರ್ಯಕ್ರಮ ನೀಡಬೇಕು ಎಂದು ಪಾಲಕರು ಭಾವನೆ ಬೆಳೆಸಿಕೊಳ್ಳುವುದಕ್ಕಿಂತ ಉತ್ತಮ ವ್ಯಕ್ತಿಯಾಗಲಿ ಎಂದು ಬಯಸಬೇಕು ಎಂದು ತಿಳಿಸಿದರು.

ವಿದುಷಿ ವಸುಧಾ ಶರ್ಮ ಮಾತನಾಡಿ, ಸಂಗೀತ ಶಾಲೆಗಳಲ್ಲಿ ಕಲಿಯುವ ವಿದ್ಯೆಗೆ ಪೂರಕವಾದ ವಾತಾವರಣ ಮನೆಯಲ್ಲಿ ಇರಬೇಕು. ಮನೆಯಲ್ಲೂ ಶ್ರದ್ಧೆಯಿಂದ ಕಲಿಯುವಂತಾಗಬೇಕು. ಆಗ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕಿ ಡಾ. ವಿಜಯಲಕ್ಷ್ಮೀ ಹೆಗಡೆ, ಕುಸುಮಾ ಪಿ. ಹೆಗಡೆ, ಅಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net