ಬಿಇಎಂಎಲ್​ ಲೇಔಟ್​ನಲ್ಲಿ ಗೆಳತಿಯ ಹತ್ಯೆಗೆ ಯತ್ನಿಸಿದವ ಅರೆಸ್ಟ್: ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿದ್ದ !

murder
Published on

ಬೆಂಗಳೂರು: ಅನ್ಯೋನ್ಯತೆ ಬೆಳೆಸಿಕೊಂಡಿದ್ದ ಮಹಿಳೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಇಎಂಎಲ್ ಲೇಔಟ್ ನಿವಾಸಿ 34 ವರ್ಷದ ಮಹಿಳೆಯ ಮುಖಕ್ಕೆ ದಿಂಬಿಟ್ಟು ಉಸಿರುಗಟ್ಟಿಸಿ ಹತ್ಯೆ ಮಾಡಲು ಯತ್ನಿಸಿದ್ದ. ಅಸ್ವಸ್ಥಗೊಂಡಿದ್ದ ಆಕೆಯನ್ನು ಕುಟುಂಬಸ್ಥರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೃತ್ಯ ಎಸಗಿದ ಉತ್ತರಹಳ್ಳಿ ನಿವಾಸಿ ಶಿವಕುಮಾರ್ (40) ಎಂಬಾತನನ್ನು ಬಂಧಿಸಲಾಗಿದೆ ಎಂದು ರಾಜರಾಜೇಶ್ವರಿನಗರ ಪೊಲೀಸರು ತಿಳಿಸಿದ್ದಾರೆ.

ವಿವಾಹಿತ ಶಿವಕುಮಾರ್​ಗೆ ಒಬ್ಬ ಪುತ್ರನಿದ್ದಾನೆ. ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಗ್ರಾನೈಟ್ ವ್ಯವಹಾರ ನಡೆಸುತ್ತಿದ್ದ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 3 ವರ್ಷದ ಹಿಂದೆ ಪತಿ ತೊರೆದಿದ್ದ ಸಂತ್ರಸ್ತ ಮಹಿಳೆ ಪುತ್ರಿ ಜತೆ ಬಿಇಎಂಎಲ್ ಬಡಾವಣೆಯಲ್ಲಿ ವಾಸಿಸುತ್ತಿದ್ದಾರೆ. ಆಕೆಗೆ ಶಿವಕುಮಾರ್ ಜತೆ ಸಲುಗೆ ಬೆಳೆದಿತ್ತು. ಈ ವಿಚಾರ ಶಿವಕುಮಾರ್ ಪತ್ನಿಗೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಜತೆಗಿನ ಸ್ನೇಹ ತೊರೆಯುವಂತೆ ಗಂಡನಿಗೆ ಒತ್ತಾಯಿಸಿದ್ದರು.

ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿತ್ತು. ಶಿವಕುಮಾರ್ ಏ.1ರಂದು ಮಹಿಳೆ ಮನೆಗೆ ಹೋಗಿದ್ದ. ಆಗ ಪತ್ನಿಯ ಜತೆಗೆ ನಡೆದ ಜಗಳದ ವಿಚಾರವನ್ನು ಹೇಳಿಕೊಂಡಿದ್ದ. ನಮ್ಮಿಬ್ಬರ ಸ್ನೇಹ ಇಲ್ಲಿಗೆ ನಿಲ್ಲಿಸೋಣ ಎಂದಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು ಶಿವಕುಮಾರ್ ದಿಂಬಿನಿಂದ ಆಕೆಯ ಮುಖ ಒತ್ತಿ ಹಿಡಿದು ಉಸಿರುಗಟ್ಟಿಸಿದ್ದಾನೆ. ಆಕೆ ಅಸ್ವಸ್ಥಗೊಂಡಿದ್ದನ್ನು ಕಂಡು ಹೆದರಿ ಪರಾರಿಯಾಗಿದ್ದ. ಕುಟುಂಬದವರು ಮಹಿಳೆಗೆ ಫೋನ್ ಮಾಡಿದಾಗ ಆಕೆ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net