

ಹುಣಸೂರು: ಬಿಜೆಪಿ ಶಾಸಕ ಮುನಿರತ್ನ ಅವರನ್ನು ಈ ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಗರದ ಸಂವಿಧಾನ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಸಂಘಟನೆ ಸದಸ್ಯರು ಶಾಸಕ ಮುನಿರತ್ನರ ವಿರುದ್ಧ ಘೋಷಣೆಗೆಳನ್ನು ಕೂಗಿದರು. ಈ ವೇಳೆ ಮಾತನಾಡಿದ ರೈತಸಂಘ ಮತ್ತು ಹಸಿರುಸೇನೆಯ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ವ್ಯಾಪಾರ ಅಥವಾ ದಂದೆಯನ್ನೇ ವೃತ್ತಿಯನ್ನಾಗಿಸಿಕೊಂಡ ಮುನಿರತ್ನರಂತಹವರೇ ವಿಧಾನಸಭೆಯಲ್ಲಿ ಬಹುತೇಕರು ಇದ್ದಾರೆ. ಇಂತಹವರಿಂದ ಪ್ರಜಾಪ್ರಭುತ್ವ, ಸೇವೆ ಎನ್ನುವ ಪದಗಳ ನಿರೀಕ್ಷೆಯೇ ತಪ್ಪಾಗುತ್ತದೆ. ಇಂತಹವರನ್ನು ಆರಿಸಿದ್ದೇವಲ್ಲ ಎನ್ನುವ ದೌರ್ಭಾಗ್ಯ ನಮ್ಮದಾಗಿದೆ. ಮಹಿಳೆಯರು ಕುರಿತು, ಒಂದು ಸಮಾಜದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಮುನಿರತ್ನರನ್ನು ಬಿಜೆಪಿ ಪಕ್ಷ ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡ ವಿ.ಬಸವರಾಜು ಕಲ್ಕುಣಿಕೆ, ಮಹದೇವಮ್ಮ ಇತರರು ಮಾತನಾಡಿದರು. ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಉಂಡುವಾಡಿ ಸಿ.ಚಂದ್ರೇಗೌಡ, ರಾಮಕೃಷ್ಣ ಅತ್ತಿಕುಪ್ಪೆ, ಸಿದ್ದೇಶ್, ಪ್ರಕಾಶ್, ಶಿವರಾಜು, ಧನಂಜಯ ಮುಂತಾದವರು ಇದ್ದರು. ತಹಸೀಲ್ದಾರ್ ಮಂಜುನಾಥ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.