

ಬೀರೂರು: ಬೇಸಿಗೆ ಸಮೀಪಿಸುತ್ತಿದ್ದು ಲಕ್ಕವಳ್ಳಿಯಿಂದ ಬರುತ್ತಿರುವ ಭದ್ರಾ ಕುಡಿಯುವ ನೀರಿನ ಪೂರೈಕೆಯಲ್ಲಿ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ಕೊಳವೆಬಾವಿ ನೀರಿನಿಂದ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಉದ್ದೇಶದಿಂದ 5 ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗಿದ್ದೇವೆ ಎಂದು ಪುರಸಭೆ ಸದಸ್ಯ ಬಿ.ಕೆ.ಶಶಿಧರ್ ತಿಳಿಸಿದರು.
ಪಟ್ಟಣದ ಬಿ.ಎಚ್.ರಸ್ತೆ ಸಮೀಪದ ವಾರ್ಡ್ ನಂ.16ರ ವಿವೇಕಾನಂದ ಉದ್ಯಾನದ ಬಳಿಯಲ್ಲಿ ಗುರುವಾರ ಕೊಳವೆ ಬಾವಿ ಕೊರೆಸಲು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬೀರೂರು-ಲಕ್ಕವಳ್ಳಿ ಸುಮಾರು 60 ಕಿ.ಮೀ. ಅಂತರವಿದ್ದು ನೀರು ಸರಬರಾಜು ಆಗುವ ವೇಳೆಯಲ್ಲಿ ವಿದ್ಯುತ್ ಸಮಸ್ಯೆ, ಯಂತ್ರೋಪಕರಣಗಳ ರಿಪೇರಿ, ಪೈಪ್‌ಗಳು ಸೋರುವಿಕೆ ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತಿತ್ತು. ಈ ಸಮಸ್ಯೆಗಳು ಆಗಾಗ್ಗೆ ಸಂಭವಿಸುತ್ತಲೇ ಇರುತ್ತದೆ. ಆ ವೇಳೆ ಪಟ್ಟಣದಲ್ಲಿ ಕುಡಿಯುವ ನೀರಿನ ಪೂರೈಕೆ ಸ್ಥಗಿತವಾಗುತ್ತದೆ ಎಂದರು.
ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ದೂರನ್ನು ಗಮನಿಸಿದ ಶಾಸಕ ಕೆ.ಎಸ್.ಆನಂದ್ ಅವರ ಮಾರ್ಗದರ್ಶನದಂತೆ ಭದ್ರಾ ನೀರು ಪೂರೈಕೆಯಲ್ಲಿ ಆಗಬಹುದಾದ ಸಮಸ್ಯೆಗಳನ್ನು ಪರಿಹರಿಸಲು 15ನೇ ಹಣಕಾಸು ಯೋಜನೆಯಲ್ಲಿ ಲಭ್ಯವಿದ್ದ 20 ಲಕ್ಷ ರೂ.ಗಳಲ್ಲಿ ಕೊಳವೆ ಬಾವಿ ಕೊರೆಸಲಾಗುತ್ತಿದೆ. ಇದರಿಂದ ನೀರು ಸಂಗ್ರಹಿಸಿ ವಾರ್ಡ್‌ಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದರು.
ಪುರಸಭೆ ಸದಸ್ಯೆ ಜ್ಯೋತಿ ಸಂತೋಷ್ ಕುಮಾರ್ ಮಾತನಾಡಿ, ನಾನು ಪ್ರತಿನಿಧಿಸಿರುವ ವಾರ್ಡ್ ನಂ.23ರ ವ್ಯಾಪ್ತಿಯಲ್ಲಿದ್ದ 5 ಕೊಳವೆ ಬಾವಿಗಳನ್ನು ಚಾಲನೆ ಮಾಡಿಸಿ ಸುಸ್ಥಿತಿಗೆ ತಂದಿದ್ದು ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಕಂಡುಬರದಂತೆ ಈಗಾಗಲೇ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅದೇ ಮಾದರಿಯಲ್ಲಿ ಈ ಕೊಳವೆ ಬಾವಿಯನ್ನು ಕೊರೆಸುತ್ತಿದ್ದು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಪುರಸಭೆ ಸದಸ್ಯರಾದ ಲಕ್ಷ್ಮಣ್, ಸಮೀವುಲ್ಲಾ, ಬಿ.ಆರ್.ಮೋಹನ್ ಕುಮಾರ್, ರಾಜು, ಲೋಕೇಶಪ್ಪ, ಹರ್ಷ, ವಿನಾಯಕ್, ಅನಂತ, ಪ್ರದೀಪ್ ಇದ್ದರು.