ಕೆ.ಆರ್.ಪುರ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಜನರ ಸಮಸ್ಯೆಗಳನ್ನು ತಹಸೀಲ್ದಾರ್-ಶಾಸಕರು ಆಲಿಸುತ್ತಿಲ್ಲ: ಗೋಪಾಲ್ ಗಂಭೀರ ಆರೋಪ

Vidhana Soudha
Published on

ಬೆಂಗಳೂರು(ಕೆ.ಆರ್.ಪುರ): ಕೆ.ಆರ್. ಪುರ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಹಗಲು ದರೋಡೆ ಮಾಡ್ತಿದ್ದಾರೆ. ಮಧ್ಯವರ್ತಿಗಳಿಲ್ಲದೆ ಸರ್ಕಾರಿ ಕಚೇರಿಯಲ್ಲಿ ಯಾವ ಕೆಲಸಗಳೂ ನಡೆಯೋದಿಲ್ಲ. ಜನರ ಸಮಸ್ಯೆಗಳನ್ನು ತಹಸೀಲ್ದಾರ್ ಅಜಿತ್ ರೈ ಆಲಿಸುತ್ತಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಡಿ.ಎ.ಗೋಪಾಲ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಪಾಲ್​, ಕೆ.ಆರ್.ಪುರ ಕ್ಷೇತ್ರದಲ್ಲಿ ಸಾಲು ಸಾಲು ಸಮಸ್ಯೆಗಳಿವೆ. ಜನರ ಕೈಗೆ ಸಿಗದಂತೆ ತಹಸೀಲ್ದಾರ್ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಹೆಸರಿಗೆ ತಾಲೂಕು ಕಚೇರಿ. ಆದರೆ ಸಾರ್ವಜನಿಕರಿಗೆ ವ್ಯವಸ್ಥಿತವಾದ ಮೂಲ ಸೌಕರ್ಯವೇ ಇಲ್ಲ. ಇದು ತಹಸೀಲ್ದಾರ್​ರ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಕೆಆರ್ ಪುರದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಸ್ಥಳೀಯ ಶಾಸಕ ಬೈರತಿ ಬಸವರಾಜು ಗಮನಹರಿಸುತ್ತಿಲ್ಲ. ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಾರ್ವಜನಿಕ ಆಸ್ಪತ್ರೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ನಿತ್ಯ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಮತ್ತೊಂದು ಸರ್ಕಾರಿ ಆಸ್ಪತ್ರೆ ನಿರ್ಮಾಣ ಆಗಬೇಕಿದೆ. ಡಿಪ್ಲೊಮಾ ಕಾಲೇಜು, ಸುಸಜ್ಜಿತವಾದ ಬಸ್ ನಿಲ್ದಾಣ ಮಾಡದಿರುವುದು ನಾಚೀಕೆಗೇಡಿನ ಸಂಗತಿ. ಕ್ಷೇತ್ರದಲ್ಲಿ ಏನಾದರೂ ಅಭಿವೃದ್ಧಿಯಾಗಿದೆ ಎಂದರೆ ಅದು ಎ.ಕೃಷ್ಣಪ್ಪ ಕಾಲದಲ್ಲಿ. ರಾಜ್ಯ ಸಂಪುಟದಲ್ಲಿ ಸ್ಥಳೀಯ ಶಾಸಕರು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆ.ಆರ್. ಪುರ ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇಲ್ಲ. ಎಲ್ಲಿ ನೋಡಿದರೂ ಹದಗೆಟ್ಟ ರಸ್ತೆಗಳು, ಗುಂಡಿಮಯ ರಸ್ತೆಗಳು ಕಾಣಿಸುತ್ತವೆ. ಒಬ್ಬ ಜನಪ್ರತಿನಿಧಿಯಾಗಿ ಸಾರ್ವಜನಿಕರ ಕುಂದು-ಕೊರತೆಗಳು ಕೇಳಲು ಒಂದೇ ಒಂದು ಸಾರ್ವಜನಿಕ ಸಭೆ ನಡೆಸಿಲ್ಲ ಎಂದರು.

ಇನ್​ಸ್ಪೆಕ್ಟರ್​ ನಂದೀಶ್​ ಅವರನ್ನು ಯಾವುದೇ ರೀತಿಯ ನೋಟಿಸ್ ನೀಡದೆ ಹುದ್ದೆಯಿಂದ ಅಮಾನತುಗೊಳಿಸಿದ್ದಾರೆ. ಅಮಾನತುಗೊಂಡ ಕಾರಣ ಒತ್ತಡಕ್ಕೆ ಸಿಲುಕಿ ಹೃದಯಾಘಾತವಾಗಿದೆ. ಕ್ಯಾಬಿನೆಟ್ ಮಿನಿಸ್ಟರ್ ಎಂಟಿಬಿ ನಾಗರಾಜ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಇನ್​ಸ್ಪೆಕ್ಟರ್ ನಂದೀಶ್ ಅವರ ಅಂತಿಮ ದರ್ಶನ ಪಡೆಯಲು ಹೋದಾಗ ಹಣ ಮತ್ತು ಒತ್ತಡವೇ ಕಾರಣ ಎಂದು ಹೇಳಿದ್ದಾರೆ. ಇನ್​ಸ್ಪೆಕ್ಟರ್ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net