

ಮುಂಬೈ: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಕೊಂದ ಆರೋಪದ ಮೇಲೆ ವೃದ್ಧನನ್ನು ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಮಂಬೈ ಬಳಿಯ ಅಂಧೇರಿಯಲ್ಲಿ ನಡೆದಿದೆ.
ಶಕುಂತಲಾ ಬಾಳೂರು (76) ಮೃತ ದುರ್ದೈವಿಯಾಗಿದ್ದು, ಆಕೆಯ ಗಂಡ ವಿಷ್ಣುಕಾಂತ್ ಬಾಳೂರು (79) ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ದಂಪತಿಗಳು ಕಾಂದಿವಲಿ ನಿವಾಸಿಗಳಾಗಿದ್ದು ಮಹಿಳೆಯು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆತ ಅವಳ ಪೋಷಣೆಯನ್ನು ಮಾಡಿ ಸುಸ್ತಾಗಿದ್ದನು.
ಮಹಿಳೆಯು ನಲವತ್ತು ವರ್ಷಗಳಿಂದ ಮಧುಮೇಹ ರೋಗಿಯಾಗಿದ್ದು, ಆಕೆ ಸಿಹಿ ತಿನ್ನುವುದನ್ನು ಬಿಟ್ಟಿರಲಿಲ್ಲ. ಇದರಿಂದಾಗಿ ಆಕೆ ಹಲವಾರು ಬಾರಿ ಅಸ್ವಸ್ಥಳಾಗಿ ಆಸ್ಪತ್ರೆ ಸೇರಿದ್ದಳು. ಅಲ್ಲದೇ, ವೈದ್ಯರು ಹಲವು ಬಾರಿ ಎಚ್ಚರಿಸಿದ ಬಳಿಕವೂ ಪತಿ ಸಿಹಿ ನೀಡದಿದ್ದಾಗ ಆತನೊಂದಿಗೆ ಜಗಳವಾಡುತ್ತಿದ್ದಳು. ಇದರಿಂದ ಮನನೊಂದ ಪತಿ ಪತ್ನಿಯನ್ನು ಕೊಂದು ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೊನೆಗೆ ಮನೆಗೆಲಸ ಮಾಡುತ್ತಿದ್ದ ಮಹಿಳೆಯು ಮನೆಗೆ ನೋಡಿದಾಗ ಶಕುಂತಲಾ ತೀವ್ರವಾಗಿ ಗಾಯಗೊಂಡು ಹಾಸಿಗೆಯ ಮೇಲೆ ಬಿದ್ದಿರುವುದನ್ನು ಕಂಡಿದ್ದಾಳೆ. ವಿಷ್ಣುಕಾಂತ್ ಕೂಡ ಅಲ್ಲಿಯೇ ಕುರ್ಚಿಯ ಮೇಲೆ ಕುಳಿತಿದ್ದನು ಎಂದು ಹೇಳಲಾಗಿದ್ದು, ಮನೆಯ ಕೆಲಸದಾಕೆ ನೆರೆಹೊರೆಯವರ ಸಹಾಯದಿಂದ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.(ಏಜೆನ್ಸೀಸ್)