ಭಿಕ್ಷೆ ನೆಪದಲ್ಲಿ ಬಂದು ಮನೆ ಮುಂದೆಯೇ ಸೊಸೆಯನ್ನು ದೋಚಿದ ಯುವಕರು: ವಶೀಕರಣ ವಿದ್ಯೆಯಿಂದ ನಡೆದ ಘಟನೆ..?

gold and money
ಸಾಂದರ್ಭಿಕ ಚಿತ್ರ
Published on

ನಾಗ್ಪುರ: ಭಿಕ್ಷೆ ಕೇಳಲು ಬಂದು ಇಬ್ಬರು ಯುವಕರು ಮನೆ ಮುಂದೆಯೇ ಸೊಸೆಯನ್ನು ದೋಚಿದ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಈ ಸಂಬಂಧ ವರ್ಷಾ ಕಿರಣ್ ಬೋರ್ಕರ್(25) ನೀಡಿದ ದೂರಿನ ಮೇರೆಗೆ ಯಶೋಧರನಗರ ಠಾಣೆ ಪೊಲೀಸರು ಇಬ್ಬರ ವಿರುದ್ಧವೂ ವಂಚನೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಿಂದಾಗಿ ಇಲ್ಲಿನ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ವರ್ಷಾ ಮತ್ತು ಆಕೆಯ ಅತ್ತೆ ಪುಷ್ಪಾ ಮನೆಯಲ್ಲಿದ್ದರು. ಒಬ್ಬ ಯುವಕನೊಬ್ಬ ಸನ್ಯಾಸಿಯ ವೇಷ ಧರಿಸಿ ಬಿಕ್ಷೆ ನೆಪದಲ್ಲಿ ಮನೆಯ ಮುಂದೆ ಬಂದಿದ್ದು, ದಾನ ಕೊಡುವಂತೆ ಹೇಳಿದ್ದಾನೆ. ಕೂಡಲೇ ಪುಷ್ಪಾ ಹತ್ತು ರೂಪಾಯಿ ಕೊಡಲು ಹೋದಾಗ ಆತ ಕುಡಿಯಲು ನೀರು ಕೇಳಿದ್ದಾನೆ. ಪುಷ್ಪಾ ಕುಡಿಯಲು ನೀರು ಕೊಟ್ಟಿದ್ದು ಆತ ಆಕೆಗೆ, ನಿನಗೆ ಕಂಟಕವಿದೆ. ನನ್ನ ಸ್ನೇಹಿತನ ಬಳಿ ಇದಕ್ಕೆ ಪರಿಹಾರವಿದೆ ಎಂದು ಜತೆಗಾರನನ್ನು ಕರೆದಿದ್ದಾನೆ.

ಕೂಡಲೇ ಆತ ಮಹಿಳೆಯ ಬಳಿ ಬಂದು ಆಕೆಯ ಕೈಗೆ ಕೆಂಪು ದಾರ ಕಟ್ಟಿ ಇಬ್ಬರೂ ಪುಷ್ಪಾ ಮತ್ತು ಅವಳ ಸೊಸೆಯತ್ತ ನೋಡಿದ್ದಾರೆ. ಸ್ವಲ್ಪ ಸಮಯದಲ್ಲೇ ಅತ್ತೆ ಮತ್ತು ಸೊಸೆ ಇಬ್ಬರೂ ಮೂರ್ಛೆ ಹೋಗಿದ್ದಾರೆ. ಆ ಬಳಿಕ ಇಬ್ಬರು ಯುವಕರು ಪುಷ್ಪಾ ಕೊರಳಲ್ಲಿದ್ದ ಎಂಟು ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಎಗರಿಸಿಕೊಂಡು ಹೋಗಿದ್ದಾರೆ.

ಸ್ವಲ್ಪ ಸಮಯದ ನಂತರ ಸಂಬಂಧಿಕರು ಮನೆಗೆ ಬಂದಾಗ ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನ್ನು ಕಂಡು ಕೂಡಲೇ ನೀರು ಚಿಮುಕಿಸಿದಾಗ ಎಬ್ಬಿಸಿದ್ದಾರೆ. ಆಗ ಮಹಿಳೆಯರಿಬ್ಬರಿಗೂ ನಡೆದ ಘಟನೆ ಬಗ್ಗೆ ತಿಳಿದಿದ್ದು, ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸದ್ದಾರೆ. ಈ ಪ್ರಕರಣದಲ್ಲಿ ಯಶೋಧರನಗರ ಪೊಲೀಸರು ವಂಚನೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರು ಯುವಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net