

ಜೈಪುರ್: ಗರ್ಭಿಣಿಯೊಬ್ಬಳು ಏಕಕಾಲಕ್ಕೆ 4 ಮಕ್ಕಳಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ರಾಜಸ್ಥಾನದ ಟೋಂಕ್ ನಗರದಲ್ಲಿ ನಡೆದಿದೆ.
ಟೋಂಕ್‌ನ ವಜೀರ್‌ಪುರದ ನಿವಾಸಿ ಕಿರಣ್ ಕನ್ವರ್ ಎಂಬಾಕೆಗೆ ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕಿರಣ್ ಚಿಕಿತ್ಸೆಗಾಗಿ ಕೆಲವು ತಿಂಗಳ ಹಿಂದೆ ಆಯುಷ್ಮಾನ್ ಆಸ್ಪತ್ರೆಗೆ ಬಂದಿದ್ದು, ಆ ಬಳಿಕ ಆಕೆ ಗರ್ಭಿಣಿಯಾಗಿದ್ದಳು. ಆ ಬಳಿಕ ಆಕೆ ವೈದ್ಯರ ಮೇಲ್ವಿಚಾರಣೆಯಲ್ಲಿ ತನ್ನ ಚಿಕಿತ್ಸೆಯನ್ನು ಮುಂದುವರೆಸಿದ್ದಳು.
ಇದನ್ನೂ ಓದಿ: ಮನೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದ ಮಹಿಳೆಯ ಕತ್ತು ಸೀಳಿದ ಹಂತಕರು: ಆಪ್ತರಿಂದಲೇ ಕೃತ್ಯ..?
ಕೊನೆಗೆ ರವಿವಾರ ತಡರಾತ್ರಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸೋಮವಾರ ಬೆಳಿಗ್ಗೆ 5.51 ಸುಮಾರಿಗೆ ಮಹಿಳೆ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಒಂದೊಂದಾಗಿ ಮುಂದಿನ ನಾಲ್ಕು ನಿಮಿಷದಲ್ಲಿ ಮತ್ತೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದು, ಈ ನಾಲ್ಕು ಮಕ್ಕಳಲ್ಲಿ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಸದ್ಯ, ನಾಲ್ಕೂ ಮಕ್ಕಳು ಚೆನ್ನಾಗಿಯೇ ಇದ್ದು, ತಾಯಿಯೂ ಆರೋಗ್ಯದಿಂದ ಇದ್ದಾಳೆ.
ಮದುವೆಯಾದ ನಂತರ ಗರ್ಭಿಣಿಯಾಗಲು ಸಾಧ್ಯವಾಗಿರದ ಆಕೆಗೆ ಸದ್ಯ ನಾಲ್ವರು ಮಕ್ಕಳಿರುವುದರಿಂದ ಕುಟುಂಬದಲ್ಲಿ ಸಂತಸ ಮೂಡಿದೆ. ಇನ್ನು ಎರಡ್ಮೂರು ಮಕ್ಕಳ ಜನನದ ಹಲವು ಸುದ್ದಿಗಳು ಮುನ್ನೆಲೆಗೆ ಬರುತ್ತಿದ್ದರೂ ನಾಲ್ಕು ಮಕ್ಕಳ ಜನನದ ಸುದ್ದಿ ಕೇಳಿಬರುವುದು ಅಪರೂಪ. ಆದರೆ ಇಂತಹ ಪ್ರಕರಣಗಳು ಲಕ್ಷದಲ್ಲಿ ಒಂದಾಗಿದ್ದು, ನಾಲ್ಕು ಮಕ್ಕಳು ಒಟ್ಟಿಗೆ ಜನಿಸಿ ತಾಯಿಯೊಂದಿಗೆ ಮಕ್ಕಳೆಲ್ಲರೂ ಸಂಪೂರ್ಣ ಆರೋಗ್ಯವಾಗಿರುವುದು ಅಚ್ಚರಿ ಹಾಗೂ ಸಂತಸದ ಸಂಗತಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.(ಏಜೆನ್ಸೀಸ್)