ಆನ್​ಲೈನ್​ ಮದ್ಯಪ್ರಿಯರಿಗೆ ಬಿತ್ತಲ್ಲಪ್ಪೋ ಗಾಳ! ಎಣ್ಣೆ ಕುಡಿಯುವ ಮೊದಲೇ ಏರಿಬಿಟ್ಟಿತು ನಶೆ...

Online shopping
Published on

ಮುಂಬೈ: ಕರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮದ್ಯವನ್ನು ಆನ್​ಲೈನ್​ನಲಷ್ಟೇ ಆರ್ಡರ್​ ಮಾಡಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ಕೊಟ್ಟ ಬೆನ್ನಲ್ಲೇ ಸಾಮಾಜಿಕ ಅಂತರ ಮರೆತು ಅಂಗಡಿಗಳ ಮುಂದೆ ನೂಕು ನುಗ್ಗುಲು ಮಾಡಿದ್ದರ ಪರಿಣಾಮವಾಗಿ, ವೈರಸ್​ ಭೀತಿಯಿಂದ ಕೇವಲ ಆನ್​ಲೈನ್​ ವ್ಯವಹಾರಕ್ಕೆ ಸರ್ಕಾರ ಅನುಮತಿ ನೀಡಿದೆ.

ಇದು ತುಂಬಾ ಒಳ್ಳೆಯ ನಡೆ ಎನಿಸಿಕೊಂಡರೂ, ಇದೀಗ ಎಣ್ಣೆ ಪ್ರಿಯರಿಗೆ ಆನ್​ಲೈನ್​ ಆರ್ಡರ್​ ಶಾಕ್​ ಕೊಟ್ಟಿದೆ. ದುಬಾರಿ ಬೆಲೆಯ ಮದ್ಯಗಳನ್ನು ಆರ್ಡರ್​ ಮಾಡಿ ಬಾಯಿ ಚಪ್ಪರಿಸುತ್ತಾ ಮನೆಯಲ್ಲಿ ಕೂತ ನೂರಾರು ಮಂದಿ ಈಗ ಬಾಯಿಬಾಯಿ ಬಡಿದುಕೊಳ್ಳುವಂತಾಗಿದೆ. ಅದರಲ್ಲಿಯೂ ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರಿಗೆ ಇಂಥ ಸ್ಥಿತಿ ಬಂದಿದೆ.

ಕಾರಣ ಇಷ್ಟೇ. ಆನ್​ಲೈನ್​ ಮಾರಾಟವನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲವರು ಎಣ್ಣೆ ಪ್ರಿಯರಿಗೆ ಗಾಳ ಹಾಕಲು ಶುರು ಮಾಡಿದ್ದಾರೆ. ತಾವು ಮದ್ಯ ಪೂರೈಕೆದಾರರು ಎಂದುಕೊಂಡು ನಕಲಿ ಹೆಸರಿನಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಮೋಸ ಮಾಡುತ್ತಿದ್ದಾರೆ. ಮದ್ಯದ ಅಂಗಡಿಗಳ ಹೆಸರಿನಲ್ಲಿ ಈ ಖಾತೆಗಳನ್ನು ತೆರೆಯಲಾಗಿದೆ.

ತಮ್ಮೂರಲ್ಲಿಯೇ ಯಾವ ಮದ್ಯದ ಅಂಗಡಿಗಳು ಆನ್​ಲೈನ್​ ಮೂಲಕ ಪೂರೈಕೆ ಮಾಡುತ್ತವೆ ಎಂಬುದನ್ನು ಆನ್​ಲೈನ್​ ಆರ್ಡರ್​ ಮಾಡುವವರು ಹುಡುಕಾಟ ನಡೆಸಿದಾಗ ಅವರಿಗೆ ಮೊದಲಿಗೆ ಕಾಣಿಸುವುದು ಇದೇ ಮೋಸದ ಅಂಗಡಿಗಳು. ಅದರ ಮೇಲೆ ಕ್ಲಿಕ್​ ಮಾಡಿ ತಮ್ಮಿಷ್ಟದ ಮದ್ಯಕ್ಕೆ ಆರ್ಡರ್​ ಮಾಡುತ್ತಾರೆ. ನಂತರ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿ ಮಾಡುವಂತೆ ಜನರಿಗೆ ಸೂಚನೆ ನೀಡಲಾಗುತ್ತದೆ. ಮುಂಗಡ ಹಣವನ್ನೋ ಅಥವಾ ಸಂಪೂರ್ಣ ಹಣವನ್ನೋ ಆ ಖಾತೆಗೆ ಇವರು ನೀಡುತ್ತಾರೆ, ಅಷ್ಟೇ...

f

ಇನ್ನು ಇಷ್ಟು ಗಂಟೆಯ ಒಳಗೆ ನಿಮ್ಮ ಮನೆಗೆ ಮದ್ಯಪೂರೈಕೆ ಮಾಡಲಾಗುತ್ತದೆ ಎಂಬ ಮೆಸೇಜ್​ ನಂಬಿಕೊಂಡು, ಅದರದ್ದೇ ಕನಸು ಕಾಣುವವರಿಗೆ ಎಷ್ಟು ಹೊತ್ತಾದರೂ ಮದ್ಯ ಬರುವುದೇ ಇಲ್ಲ. ಗಂಟೆ ಬಿಟ್ಟು ದಿನಗಳಾದರೂ ಅದರ ಪತ್ತೆಯೇ ಇರುವುದಿಲ್ಲ. ಆಗಲೇ ತಾವು ಮೋಸ ಹೋಗಿರುವ ವಿಷಯ ತಿಳಿಯುತ್ತದೆ. ಸಹಸ್ರಾರು ರೂಪಾಯಿ ಕಳೆದುಕೊಂಡು ಕುಡಿಯುವ ಮೊದಲೇ ನಶೆ ಏರುವ ಸ್ಥಿತಿ ಉಂಟಾಗುತ್ತದೆ.

ತಮ್ಮ ಗುಟ್ಟು ರಟ್ಟಾಗುವ ಭಯದಿಂದ ಕೆಲವರು ಮಾನಕ್ಕೆ ಅಂಜಿ ಕಂಪ್ಲೇಂಟ್​ ಕೂಡ ಕೊಡಲು ಅನೇಕರು ಹೋಗುತ್ತಿಲ್ಲ. ಆದರೆ ಇದೀಗ ಕೆಲವರು ಪೊಲೀಸ್​ ಕಂಪ್ಲೇಂಟ್​ ಕೊಟ್ಟಿದ್ದರಿಂದ ವಿಷಯ ಬಹಿರಂಗಗೊಂಡಿದೆ. ನೌಕಾ ಪಡೆಯ ನಿವೃತ್ತ ಅಧಿಕಾರಿ, ಸಿನಿಮಾ ನಿರ್ಮಾಪಕ, ಮಾಜಿ ಶಾಸಕರೊಬ್ಬರ ಸ್ನೇಹಿತರೂ ಸೇರಿದಂತೆ ಗಣ್ಯ ವ್ಯಕ್ತಿಗಳು ಎನಿಸಿಕೊಂಡವರೇ ಹೆಚ್ಚಿನ ರೀತಿಯಲ್ಲಿ ಮೋಸ ಹೋಗಿರುವುದಾಗಿ ಪೊಲೀಸ್​ ಇಲಾಖೆ ಹೇಳಿದೆ.

ಮುಂಬೈನ ಜುಹೂನಲ್ಲಿರುವ ಜನಪ್ರಿಯ ಮದ್ಯದಂಗಡಿಯ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಖಾತೆ ತೆರೆಯಲಾಗಿತ್ತು. ಅದನ್ನು ನಂಬಿದ್ದ ನಾನು 40 ಸಾವಿರ ರೂ. ಮೌಲ್ಯದ ಮದ್ಯ ಖರೀದಿಸಿದ್ದೆ,. 5 ಸಾವಿರ ರೂ. ಮುಂಗಡ ಹಣ ಪಾವತಿಸಿದ್ದೆ. ಮದ್ಯ ಮನೆಗೆ ಬಾರದೇ ಇದ್ದಾಗಲೇ ಮೋಸ ಹೋಗಿರುವುದು ತಿಳಿದಿದೆ ಎಂದು ಚಿತ್ರ ನಿರ್ಮಾಪಕ ಒಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೊಲೀಸ್​ ಕಂಪ್ಲೇಂಟ್​ ಕೊಟ್ಟ ನಂತರ ತನಿಖೆ ಕೈಗೊಂಡಾಗ ಬಿಹಾರದ ಕೆಲ ಸ್ಥಳಗಳಿಂದ ಕೆಲ ಕಿಡಿಗೇಡಿಗಳು ಈ ರೀತಿ ಮಾಡುತ್ತಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net