

ಬೆಂಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ಮುಸ್ಲಿಂ ಸಮುಯದಾಯದವರು ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿರುವ ಹಲ್ಲೆಯನ್ನು ಸಮರ್ಥಿಸಿಕೊಂಡು ಆರೋಗ್ಯ ಕಾರ್ಯಕರ್ತರನ್ನೇ ಬೈದು ಇತ್ತೀಚೆಗಷ್ಟೇ ವಿವಾದ ಸೃಷ್ಟಿಸಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತೊಮ್ಮೆ ತಮ್ಮ ವರಸೆ ತೋರಿಸಿದ್ದಾರೆ.
ಮುಸ್ಲಿಮರ ದುಡ್ಡನ್ನು ಕರೊನಾ ಸೇವೆಗೆ ಬಳಸುವುದು ಬೇಡ, ಇದು ಮುಸ್ಲಿಮರಿಗಷ್ಟೇ ಸೀಮಿತ ಎನ್ನುವ ಮೂಲಕ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ!
ಕರೊನಾ ಸೋಂಕಿತರಿಗಾಗಿ ಜಾತಿ-ಧರ್ಮದ ಭೇದವಿಲ್ಲದೇ ವೈದ್ಯಕೀಯ ಸಿಬ್ಬಂದಿ ಎಲ್ಲರಿಗೂ ಚಿಕಿತ್ಸೆ ನೀಡುತ್ತಿರುವ ಈ ಸಂದರ್ಭದಲ್ಲಿ, ಎಲ್ಲಾ ಜಾತಿ-ಧರ್ಮದವರು ತಮ್ಮ ಕೈಲಾದ ಮಟ್ಟಿಗೆ ಧನಸಹಾಯ ಮಾಡುತ್ತಿರುವ ಈ ಹೊತ್ತಿನಲ್ಲಿ ಮುಸ್ಲಿಮರ ದುಡ್ಡನ್ನು ಈ ಸೇವೆಗೆ ಕೊಡುವುದು ಏಕೆ ಎನ್ನುವ ಈ ಮಾತು ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ವಕ್ಫ್ ಬೋರ್ಡ್ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಲು ಮುಂದಾದ ಸಂದರ್ಭದಲ್ಲಿ, ಅಡ್ಡಗಾಲು ಹಾಕಿರುವ ಜಮೀರ್, ಈ ಹಣವನ್ನು ನೀಡದಂತೆ ಸಲಹೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ, ಮುಖ್ಯಮಂತ್ರಿ ಪರಿಹಾರ ನಿಧಿಗಳಿಗೆ ಶಾಸಕ ತನ್ವೀರ್ ಸೇಠ್ 20 ಲಕ್ಷ ಕೊಟ್ಟಿರುವುದಕ್ಕೂ ಹಾಗೂ ವಕ್ಫ್ ಬೋರ್ಡ್ ಧನ ಸಹಾಯಕ್ಕೆ ಮುಂದಾಗಿರುವುದಕ್ಕೂ ಜಮೀರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತನ್ವೀರ್ ಸೇಠ್ ಅವರು ಅಧ್ಯಕ್ಷರಾಗಿರುವ ಟಿಪ್ಪು ಸುಲ್ತಾನ್ ಎಸ್ಟೇಟ್ ಬೋರ್ಡ್ ವತಿಯಿಂದ 20 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಲಾಗಿದೆ. ಜತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ವಕ್ಫ್ ಬೋರ್ಡ್ ತನ್ನ ಅಧೀನದ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಇದರಿಂದ ಜಮೀರ್ ಕೆಂಡಾಮಂಡಲವಾಗಿದ್ದು, ಮುಸ್ಲಿಮರ ಹಣವನ್ನು ಮುಸ್ಲಿಮರ ಅಭಿವೃದ್ಧಿಗಷ್ಟೇ ಉಪಯೋಗಿಸಿ, ಅದು ಮುಸ್ಲಿಮರ ಹಣ. ಈ ರೀತಿ ಕರೊನಾ ನಿಧಿಗೆ ಕೊಡುವುದು ಸರಿಯಲ್ಲ ಎಂದಿದ್ದಾರೆ!
ಜಮೀರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಬಾಲಿಶವಾಗಿದೆ. ಇಂಥ ಮಾತುಗಳು ಜನಪ್ರತಿನಿಧಿಗಳಿಗೆ ಶೋಭೆ ತರುವಂಥದ್ದಲ್ಲ. ಸರ್ಕಾರಕ್ಕೆ ದೇಣಿಗೆ ನೀಡಬಾರದು ಎಂದು ಹೇಳುತ್ತಿರುವ ಶಾಶಕರು, ಸರ್ಕಾರ ವರ್ಷಕ್ಕೆ ವಕ್ಫ್ ಮಂಡಳಿಗೆ 200 ಕೋಟಿ ರೂಒಪಾಯಿ ದೇಣಿಗೆ ನೀಡುವುದನ್ನು ಮರೆತರೆ ಹೇಗೆ? ಅವರು ಮಾತನಾಡುವುದಿದ್ದರೆ ವಕ್ಫ್ ಆಸ್ತಿಯನ್ನು ತಿಂದು ತೇಗಿದವರ ಬಗ್ಗೆ ಮಾತನಾಡಲಿ, ಇಂಥ ಕೆಟ್ಟ ಮನಸ್ಥಿತಿ ಒಳ್ಳೆಯದಲ್ಲ ಎಂದಿದ್ದಾರೆ.