

ಮುಂಬೈ: ಮಹಾರಾಷ್ಟ್ರ ದೇಶದಲ್ಲೇ ಕರೊನಾ ವೈರಸ್ನಿಂದ ಹೆಚ್ಚು ಬಾಧಿತವಾಗಿರುವ ರಾಜ್ಯ. ಅದರಲ್ಲೂ ಮುಂಬೈನಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ವೈರಸ್ ತಡೆಗಟ್ಟುವ ಸಲುವಾಗಿ ಸರ್ಕಾರ ಸಾಮೂಹಿಕ ಪರೀಕ್ಷೆಗೆ ನಿರ್ಧರಿಸಿದೆ. ಅದಕ್ಕಾಗಿ ಮುಂಬೈ ಮೊದಲ ಮೊಬೈಲ್ ಕರೊನಾ ವೈರಸ್ ಟೆಸ್ಟಿಂಗ್ ಬಸ್ ಅನ್ನು ಪಡೆದುಕೊಂಡಿದೆ.
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೊಪೆ ಹಾಗೂ ಪರಿಸರ ಸಚಿವ ಆದಿತ್ಯ ಠಾಕ್ರೆ ಅವರು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಆಯುಕ್ತರಾದ ಪ್ರವೀಣ್ ಪರ್ದೇಸಿ ಜತೆಗೂಡಿ ಶುಕ್ರವಾರ ಮೊಬೈಲ್ ಕರೊನಾ ಟೆಸ್ಟಿಂಗ್ ಬಸ್ ಅನ್ನು ಉದ್ಘಾಟಿಸಿದರು. ವರ್ಲಿಯಲ್ಲಿರುವ ನ್ಯಾಶನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಮೈದಾನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಸ್ ಉದ್ಘಾಟಿಸಿದರು.
ಸರ್ವಸಾಧನ ಸಲಕರಣೆಗಳನ್ನು ಹೊಂದಿರುವ ಕರೊನಾ ಟೆಸ್ಟಿಂಗ್ ಲ್ಯಾಬ್ ಅನ್ನು ಬಸ್ ಹೊಂದಿದೆ. ಎಕ್ಸ್ ರೇ ಪರೀಕ್ಷಾ ಸೌಲಭ್ಯ ಸಹ ಇದೆ. ಇನ್ನಿತರ ಸೌಲಭ್ಯಗಳನ್ನು ಶೀಘ್ರದಲ್ಲಿ ಅಳವಡಿಸಲಾಗುತ್ತದೆ. ಬಸ್ ಒಳಗೆ ಚಿಕ್ಕದಾದ ಛೇಂಬರ್ ಇದ್ದು, ಅಲ್ಲಿ ಕರೊನಾ ಟೆಸ್ಟಿಂಗ್ ನಡೆಯುತ್ತದೆ.
ಸಾಮೂಹಿಕ ಪರೀಕ್ಷೆಗೆ ಬಳಸಲಾಗುತ್ತಿರುವ ಮೊದಲ ಮೊಬೈಲ್ ಕೋವಿಡ್-19 ಟೆಸ್ಟಿಂಗ್ ಬಸ್ ಇದಾಗಿದೆ. ಇದರಲ್ಲಿ O2 ಸ್ಯಾಚುರೇಶನ್ ಸಂಯೋಜನೆಯನ್ನು ಬಳಸಲಾಗುತ್ತದೆ. ಕರೊನಾ ವೈರಸ್ ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಆಧಾರಿತ ಎಕ್ಸ್ರೇಯಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ.
ಬಸ್ನಲ್ಲಿ ಆರ್ಟಿ-ಪಿಸಿಆರ್ ಸ್ವ್ಯಾಬ್ ಸಂಗ್ರಹ ಸೌಲಭ್ಯವು ಇದೆ. ಇದು ವಿವಿಧ ಸ್ಲಂಗಳಿಗೆ ತೆರಳಿ ಪರೀಕ್ಷಿಸಿ ಹೆಚ್ಚು ತೊಂದರೆಯಲ್ಲಿರುವ ಸೋಂಕಿತನನ್ನು ಪ್ರತ್ಯೇಕಿಸುತ್ತದೆ ಎಂದು ಬಿಎಂಸಿ ಹೇಳಿದೆ.
ಕೋವಿಡ್-19 ಟೆಸ್ಟಿಂಗ್ ಬಸ್ ಅನ್ನು ಕೆಆರ್ಎಸ್ಎನ್ಎಎ ಡಯಾಗ್ನೋಸ್ಟಿಕ್ ಮತ್ತು ಐಐಟಿ ಹಳೇ ವಿದ್ಯಾರ್ಥಿ ಮಂಡಳಿ ಸಹಕಾರದಿಂದ ತಯಾರಿಸಲಾಗಿದ್ದು, ಕ್ಲೌಡ್ ಟ್ರಾನ್ಸ್ಫಾರ್ಮ್, ವಿಕಿರಣ ವಿಭಾಗದ ಪರಿಣಿತರು ಮತ್ತು ವೈದ್ಯರ ಸಹಾಯದಿಂದ ಕರೊನಾ ಟೆಸ್ಟಿಂಗ್ ಬಸ್ ರೋಗಿಗಳನ್ನು ಸುಲಭವಾಗಿ ಪತ್ತೆಹಚ್ಚಲಿದೆ.
ಈ ರೀತಿಯ ಮತ್ತಷ್ಟು ಬಸ್ಗಳನ್ನು ವಿನ್ಯಾಸಗೊಳಿಸಲು ಬಿಎಂಸಿ ಯೋಜನೆ ರೂಪಿಸಿದೆ. (ಏಜೆನ್ಸೀಸ್)