ಮುಕೇಶ್ ಅಂಬಾನಿ ವಿಶ್ವದ ಐದನೇ ಶ್ರೀಮಂತ

mukesh ambani
Published on

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಕಳೆದ ವಾರ ಅವರು ಆರನೇ ಸ್ಥಾನದಲ್ಲಿದ್ದರು. ರಿಲಯನ್ಸ್ ಇಂಡಸ್ಟ್ರೀಸ್​ನ ಷೇರು ಮೌಲ್ಯ ಬುಧವಾರ 2,010 ರೂಪಾಯಿಗೆ ತಲುಪಿದೆ. ಇದರಿಂದಾಗಿ ಸಂಸ್ಥೆಯ ಮಾರುಕಟ್ಟೆ ಬಂಡವಾಳ 12.70 ಲಕ್ಷ ಕೋಟಿ ರೂಪಾಯಿ ಆಗಿದೆ.

ಮುಕೇಶ್ ಅಂಬಾನಿ ಆಸ್ತಿ ಮೌಲ್ಯದಲ್ಲಿ 3.2 ಬಿಲಿಯನ್ ಡಾಲರ್ (ಶೇ. 4.49) ಹೆಚ್ಚಳವಾಗಿದೆ. ಇದೀಗ ಅವರ ಸಂಪತ್ತಿನ ಮೌಲ್ಯ 75 ಬಿಲಿಯನ್ ಡಾಲರ್ (5.61 ಲಕ್ಷ ಕೋಟಿ ರೂಪಾಯಿ) ಆಗಿದೆ. ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಆಸ್ತಿ ಮೌಲ್ಯ 185.8 ಬಿಲಿಯನ್ ಡಾಲರ್. ಎರಡನೇ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ (113.1 ಬಿಲಿಯನ್ ಡಾಲರ್), ಮೂರನೇ ಸ್ಥಾನದಲ್ಲಿ ಎಲ್​ವಿಎಮ್​ಚ್ ಸಂಸ್ಥೆಯ ಮುಖ್ಯಸ್ಥ ಬೆರ್ನಾರ್ಡ್ ಅರ್ನಾಲ್ಟ್ (112 ಬಿಲಿಯನ್ ಡಾಲರ್) ಮತ್ತು ನಾಲ್ಕನೇ ಸ್ಥಾನದಲ್ಲಿ ಫೇಸ್​ಬುಕ್ ಮುಖ್ಯಸ್ಥ ಮಾರ್ಕ್ ಜುಕರ್​ಬರ್ಗ್ (89 ಬಿಲಿಯನ್ ಡಾಲರ್) ಇದ್ದಾರೆ.

ವಿಶ್ವದೆಲ್ಲೆಡೆ ಕರೊನಾ ಕಾರಣದಿಂದಾಗಿ ಆರ್ಥಿಕ ಹಿಂಜರಿತವಿದ್ದರೂ, ರಿಲಯನ್ಸ್ ಕಂಪನಿ ಆದಾಯ ಏರುತ್ತಿದೆ. ಹತ್ತಾರು ವಿದೇಶಿ ಸಂಸ್ಥೆಗಳು ರಿಲಯನ್ಸ್​ನಲ್ಲಿ ಹೂಡಿಕೆ ಮಾಡುತ್ತಿವೆ. ಜೂನ್ ತಿಂಗಳನ್ನು ಸಂಸ್ಥೆಯ ಸುವರ್ಣ ತಿಂಗಳು ಎಂದು ಮುಕೇಶ್ ಅಂಬಾನಿ ಕರೆದಿದ್ದಾರೆ. ಸಂಸ್ಥೆಯ ಶೇ. 33 ಪಾಲನ್ನು ವಿದೇಶಿ ಹೂಡಿಕೆದಾರರಿಗೆ ಮಾರಾಟ ಮಾಡಲಾಗಿದೆ. ಇತ್ತೀಚೆಗೆ ಗೂಗಲ್ ಸಂಸ್ಥೆ ರಿಲಯನ್ಸ್​ನಲ್ಲಿ 33,737 ಕೋಟಿ ರೂಪಾಯಿ (ಶೇ. 7.7 ಷೇರು) ಹೂಡಿಕಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net