ಮುಜರಾಯಿ ದೇವಾಲಯಗಳ ನೌಕರರಿಂದ ವಾರದ ರಜೆಗೆ ಒತ್ತಾಯ

temple
Published on

ಬೆಂಗಳೂರು: ಮುಜರಾಯಿ ಇಲಾಖೆಯ ‘ಸಿ’ ಮತ್ತು ‘ಡಿ’ ದರ್ಜೆಯ ನೌಕರರಿಗೆ ವಾರದ ರಜೆ ನೀಡಬೇಕು ಎಂದು ನೌಕರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾರ್ಮಿಕ ಕಾಯ್ದೆ ಪ್ರಕಾರ ಕಾಯಂ ಅಥವಾ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ವಾರದಲ್ಲಿ ಒಂದು ದಿನ ರಜೆ ನೀಡಬೇಕಿದೆ. ಅದು ಪ್ರತಿ ಕಾರ್ಮಿಕನ ಮೂಲಭೂತ ಹಕ್ಕು. ಆದರೆ ಮುಜರಾಯಿ ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ವಾರದ ರಜೆಯೇ ಇಲ್ಲವಾಗಿದೆ. ಕೆಲವರು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಕೆಲಸ ಮಾಡುತ್ತಾರೆ. ನೌಕರರು ಸೇವಾ ಕೌಂಟರ್‌ಗಳು, ಪೂಜಾ ಸಾಮಗ್ರಿಗಳ ಸಂಗ್ರಹ ಕೌಂಟರ್, ಕಚೇರಿ ಕೆಲಸ ಮತ್ತಿತರ ಸೇವೆಗಳಲ್ಲಿ ತೊಡಗಿರುತ್ತಾರೆ. ಅರ್ಚಕರಾದರೆ ಪಾಳಿ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಾರೆ. ಆದರೆ ಇವರಿಗೆ ಪಾಳಿಯೂ ಇಲ್ಲ ವಾರದ ರಜೆಯೂ ಇಲ್ಲ. ವಾರದ ಎಲ್ಲ ದಿನವೂ ಕೆಲಸ ಮಾಡಬೇಕಾಗಿದೆ. ಹೀಗಾಗಿ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ವಾರದ ರಜೆ ನೀಡಬೇಕು ಎಂದು ನೌಕರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net