

ಆನಂದಪುರ: ಆಚಾಪುರ ಗ್ರಾಪಂ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದಲ್ಲಿ ಭಾನುವಾರ ಮುಸ್ಲಿಮರು ಮತ್ತು ಹಿಂದುಗಳು ಸೇರಿ ಶ್ರದ್ಧಾಭಕ್ತಿಯಿಂದ ಮೊಹರಂ ಆಚರಿಸಿದರು.
ಹಿಂದು ಮತ್ತು ಮುಸ್ಲಿಮರು ಸಾಮರಸ್ಯದಿಂದ ಮೊಹರಂ ಆಚರಿಸುವ ಸಂಪ್ರದಾಯ ಹಲವು ದಶಕಗಳಿಂದ ಇದೆ. ಹಿಂದು ಪದ್ಧತಿಯಂತೆ ಮುಸ್ಲಿಮರು ದೇವರ ಆರಾಧನೆ ಮಾಡುತ್ತಾರೆ.
ಗ್ರಾಮದ ಶೇಖ್ ಬುಡೇನ್ ಸಾಹೇಬ್ ಮನೆ ಅಂಗಳದಲ್ಲಿನ ಬೆಳಗ್ಗೆ ಹೂವಿನಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಅಲಾಬಿ ದೇವರನ್ನು ಸ್ಥಾಪಿಸಿ ಇಡೀ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಹಿಂದುಗಳು ಮಂಗಳವಾದ್ಯ ನುಡಿಸುತ್ತ ಸಾಗಿದರೆ, ಪಲ್ಲಕ್ಕಿಯನ್ನು ಹಿಂದು ಮತ್ತು ಮುಸ್ಲಿಮ್ ಯುವಕರು ಹೆಗಲ ಮೇಲೆ ಹೊತ್ತು ಸಾಗುವುದು ಇಲ್ಲಿನ ವಿಶೇಷತೆ. ದೇವರ ಸ್ತುತಿ ಮಾಡುತ್ತ ದಾರಿಯುದ್ದಕ್ಕೂ ದೀವಟಿಗೆ, ಹಿಲಾಲು ಹಿಡಿದು ಸಾಗುತ್ತ ಹಬ್ಬದಲ್ಲಿ ಪಾಲ್ಗೊಳ್ಳುವುದು ಭಾವೈಕ್ಯದ ಪ್ರತೀಕ.
ಶನಿವಾರ ರಾತ್ರಿ ಕತ್ತಲು ರಾತ್ರಿ ಆಚರಣೆ ನಡೆಯಿತು. ಈ ನಿಮಿತ್ತ ವಿಶೇಷ ಪೂಜೆ, ಬಲಿ ಸಮರ್ಪಣೆ , ಪ್ರಸಾದ ವಿತರಣೆ ಮತ್ತು ಸಾಮೂಹಿಕ ಪೂಜೆ ನಡೆಯಿತು. ಮೊಹರಂ ಹಬ್ಬದ ದಿನ ಭಾನುವಾರ ನಸುಕಿನಲ್ಲಿಯೇ ಎರಡೂ ಧರ್ಮದವರು ಮಂಗಳವಾದ್ಯ ಸಹಿತ ಮೆವರಣಿಗೆ ನಡೆಸಿ ಮುರುಘಾ ಮಠದ ಮಸೀದಿವರೆಗೆ ತೆರಳಿ ಅಲ್ಲಿ ಎರಡೂ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ದೇವರ ಗುಡಿಯ ಬಳಿ ಹಿಂದಿರುಗಿ ಬೆಂಕಿ ಕುಂಡ ಸುತ್ತಿ ಹರಕೆ ಸಲ್ಲಿಸಿದರು. ನಂತರ ದೇವರ ಗುಡಿಯಲ್ಲಿ ಪಲ್ಲಕ್ಕಿ ಸಹಿತ ದೇವರನ್ನು ಕೂರಿ ಪೂಜಾ ಕಾರ್ಯ ನಡೆಸಿದರು. ಸುನ್ನಿ ಪಂಗಡದವರು ತಮ್ಮ ಆರಾಧ್ಯ ದೈವ ಅಲಾಬಿ ದೇವರಿಗೆ ವಿವಿಧ ನೈವೇದ್ಯ ಸಮರ್ಪಿಸಿದರು. ಆಗಮಿಸಿದವರಿಗೆ ಸಕ್ಕರೆ ಹಾಗೂ ಮಿಠಾಯಿ ವಿತರಿಸಿದರು.
ಉತ್ಸವ ಸಮಿತಿ ಅಧ್ಯಕ್ಷ ಅಬ್ದುಲ್ ಘನಿ, ಉಪಾಧ್ಯಕ್ಷ ಗೌಸ್, ಕಾರ್ಯದರ್ಶಿ ಬಶೀರ್, ಸದಸ್ಯರಾದ ನಬಿ ಸಾಬ್, ಆರಿಫ್, ನಯಾಜ್, ಶಾಂತಕುಮಾರ್, ಶೇಖರಣ್ಣ, ವೀರೇಂದ್ರ, ಶೇಖರ ಪೂಜಾರಿ, ತೌಸಿಫ್,ರಂಗನಾಥಪ್ಪ, ಅಲಿ, ಮುನೀರ್, ಸಾದಿಕ್, ಶಮೀರ್, ಮುನಾಫ್, ತೋಹಿದ್ ಇತರರಿದ್ದರು.