

ಮೂಡಿಗೆರೆ: ತಾಲೂಕಿನ ನಂದಿಪುರ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳ ಗುಂಪೊಂದು ತೋಟಗಳಿಗೆ ಲಗ್ಗೆಯಿಟ್ಟು ಅಡಕೆ, ಕಾಫಿ ಮತ್ತಿತರೆ ಬೆಳೆಗಳನ್ನು ಧ್ವಂಸ ಮಾಡಿದೆ.
ಕಳೆದ ಒಂದು ವಾರದಿಂದ ಕಾಡಾನೆಗಳು ನಂದಿಪುರ ಗ್ರಾಮದ ಸುತ್ತಮುತ್ತಲಿನ ತೋಟಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ದುಗ್ಗೇಗೌಡ ಎಂಬುವರ ಕಾಫಿ, ಅಡಕೆ, ಬಾಳೆ ಗಿಡಗಳನ್ನು ನಾಶಪಡಿಸಿದ್ದು, ಅಲ್ಲೇ ಬೀಡುಬಿಟ್ಟಿವೆ. ಇದರಿಂದ ತೋಟದ ಮಾಲೀಕರು ಮತ್ತು ಕೂಲಿ ಕಾರ್ಮಿಕರು ಜೀವಭಯದಿಂದ ತಿರುಗಾಡುವಂತಾಗಿದೆ.
ಒಂದೆಡೆ ಧಾರಾಕಾರ ಮಳೆಯಿಂದಾಗಿ ಸಲು ಕೊಳೆಯುತ್ತಿದ್ದರೆ, ಮತ್ತೊಂದೆಡೆ ಕಾಡಾನೆ ದಾಳಿಯಿಂದ ಬೆಳೆ ನಾಶವಾಗುತ್ತಿದೆ. ಕೂಡಲೇ ಅರಣ್ಯ ಇಲಾಖೆ ಕಾಡಾನೆಗಳನ್ನು ಹಿಮ್ಮೆಟ್ಟಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.